ಚೆನ್ನೈ/ನವದೆಹಲಿ: ಆರ್ಕ್ಟಿಕ್ನಲ್ಲಿ ವೇಗವಾಗಿ ಹಿಮ ಕರಗುವುದಕ್ಕೂ ಕೇರಳ ಸಹಿತ ಭಾರತದ ಅನೇಕ ಭಾಗಗಳಲ್ಲಿ ಅತಿವೃಷ್ಟಿಯಾಗುವುದಕ್ಕೂ ನೇರ ಸಂಬಂಧವಿದೆ ಎನ್ನುವುದನ್ನು ಅಧ್ಯಯನವೊಂದು ರುಜುವಾತು ಪಡಿಸಿದೆ. ಸುಮಾರು 9,000 ಕಿ.ಮೀ. ದೂರವಿರುವ ಆರ್ಕ್ಟಿಕ್, ಭಾರತದ ಮಳೆ ಸ್ವರೂಪದ ಮೇಲೆ ಪ್ರಭಾವ ಬೀರುತ್ತಿರುವ ಅಂಶವುಳ್ಳ ವಿಸõತ ಅಧ್ಯಯನ ವರದಿಯನ್ನು ‘ನೇಚರ್’ ಪತ್ರಿಕೆ ಪ್ರಕಟಿಸಿದೆ. ಇದನ್ನು ‘ಆರ್ಕ್ಟಿಕ್ ಬಟರ್ಫ್ಲೈ ಪರಿಣಾಮ’ ಎನ್ನುತ್ತಾರೆ. ಭಾರತ ಮತ್ತು ನಾರ್ವೆಯ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ‘ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನೆ ಕೇಂದ್ರದ (ಎನ್ಸಿಪಿಒಆರ್) ವಿಜ್ಞಾನಿ ಸೌರವ್ ಚಟರ್ಜಿ ನೇತೃತ್ವದ ತಂಡ ಈ ಅಧ್ಯಯನ ನಡೆಸಿತ್ತು.
ಬಾರ್ಕನ್ಸ್-ಕಾರಾ ಸಮುದ್ರ ವಲಯದಲ್ಲಿ ಬೇಸಿಗೆಯಲ್ಲಿ ಸಮುದ್ರ ಹಿಮ ಕಡಿಮೆಯಾದಾಗ ಭಾರತದ ಬೇಸಿಗೆಯ ಮುಂಗಾರು ಕಾಲದ ಅಂತಿಮ ಘಟ್ಟದಲ್ಲಿ, ಅಂದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅತಿಯಾಗಿ ಮಳೆಯಾಗುವ ಪ್ರವೃತ್ತಿಯನ್ನು ಅಧ್ಯಯನ ಕಂಡುಕೊಂಡಿದೆ ಎಂದು ಚಟರ್ಜಿ ಹೇಳಿದ್ದಾರೆ. ಅತಿವೃಷ್ಟಿಗೆ ಅಗತ್ಯವಾದ ಬೆಚ್ಚಗಿನ ವಾತಾವರಣ ಅರಬ್ಬಿ ಸಮುದ್ರದಲ್ಲಿರುವುದು ಕೂಡ ಹೆಚ್ಚು ಮಳೆಯಾಗಲು ಕಾರಣ ಎಂದು ತಿಳಿಸಿದ್ದಾರೆ.
ಆರ್ಕ್ಟಿಕ್ ವಲಯವು ತಾಪಮಾನ ಬದಲಾವಣೆಗೆ ಜಗತ್ತಿನ ಬೇರಾವುದೇ ಭಾಗಕ್ಕಿಂತ ಹೆಚ್ಚು ಪ್ರಬಲವಾಗಿ ಸ್ಪಂದಿಸುತ್ತದೆ.
| ಸೌರವ್ ಚಟರ್ಜಿ ಎನ್ಸಿಪಿಒಆರ್ ವಿಜ್ಞಾನಿ
ಐತಿಹಾಸಿಕ ಡೇಟಾ: ಭಾರತೀಯ ಹವಾಮಾನ ಇಲಾಖೆಯಿಂದ ಪಡೆದ ಮಳೆಯ ಐತಿಹಾಸಿಕ ದತ್ತಾಂಶ ಮತ್ತು ರಾಷ್ಟ್ರೀಯ ಹಿಮ ಮತ್ತು ಮಂಜುಗಡ್ಡೆ ದತ್ತಾಂಶ ಕೇಂದ್ರದಿಂದ ಪಡೆದ ಸಮುದ್ರ ಹಿಮ ಡೇಟಾಗಳ ವಿಶ್ಲೇಷಣೆಯ ಆಧಾರದಲ್ಲಿ ಸಂಶೋಧಕರು ಆರ್ಕ್ಟಿಕ್ ವಲಯದ ಪರಿಣಾಮದ ಬಗ್ಗೆ ನಿರ್ಧಾರಕ್ಕೆ ಬಂದಿದ್ದಾರೆ. ಈ ವರ್ಷ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಕಂಡು ಬಂದ ಅತಿವೃಷ್ಟಿ ಪ್ರಕರಣಗಳು ಆರ್ಕ್ಟಿಕ್ನಲ್ಲಿ ಅಪಾರ ಪ್ರಮಾಣದಲ್ಲಿ ಸಾಗರ ಹಿಮ ನಷ್ಟವಾದ ಪರಿಣಾಮ ಆಗಿರಬಹುದು ಎಂದು ವರದಿಯ ಸಹ-ಲೇಖಕರಾದ ಎಂ. ರವಿಚಂದ್ರನ್ ಹೇಳಿದ್ದಾರೆ. ಅವರು ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಆಗಿದ್ದಾರೆ.