ಮೈಸೂರು: ದುಷ್ಟಶಕ್ತಿ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಅರಮನೆ ಆವರಣದಿಂದ ಬನ್ನಿ ಮಂಟಪದತ್ತ ಹೊರಟಿದೆ.
ಬುಧವಾರ ಸಂಜೆ 5 ರಿಂದ 5.30ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಸಾಂಸ್ಕೃತಿಕ ಸಿರಿ ಮತ್ತು ಧಾರ್ಮಿಕ ಐಸಿರಿಯ ಸಮ್ಮಿಲನದೊಂದಿಗೆ ವಿಜಯದಶಮಿ ಮೆರವಣಿಗೆ ಹೊರಟಿದ್ದು, 70ಕ್ಕೂ ಹೆಚ್ಚು ಕಲಾತಂಡಗಳು, ಸ್ತಬ್ಧಚಿತ್ರಗಳು ಸಾಥ್ ನೀಡಿವೆ. ಪುಷ್ಪಾಲಂಕಾರದಿಂದ ಅಂಬಾರಿ ಕಂಗೊಳಿಸುತ್ತಿದೆ.
750 ಕೆಜಿ ತೂಕದ ಚಿನ್ನದ ಅಂಬಾರಿಯನ್ನ 3ನೇ ಬಾರಿಗೆ ಆನೆ ಅಭಿಮನ್ಯು ಹೊತ್ತಿದ್ದಾನೆ. ಕ್ಯಾಪ್ಟನ್ ಅಭಿಮನ್ಯುಗೆ 8 ಆನೆಗಳು ಸಾಥ್ ನೀಡಿವೆ. ಜಂಬೂ ಸವಾರಿಯನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಅರಮನೆ ಆವರಣ, ರಸ್ತೆ ಬದಿ, ಅಂಗಡಿ-ಮನೆಗಳ ಮಹಡಿ ಮೇಲೆ ನಿಂತಿದ್ದಾರೆ.
ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂ ಸವಾರಿ ಮೆರವಣಿಗೆ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದಕ್ಕೂ ಪಲ್ಲಕ್ಕಿಯಲ್ಲಿಯಲ್ಲಿ ಕತ್ತಿ ಇಟ್ಟು ಕಾರಿನಲ್ಲಿ ವಿಜಯಯಾತ್ರೆ ಹೊರಟ ರಾಜವಂಶಸ್ಥಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಭುವನೇಶ್ವರಿ ದೇವಸ್ಥಾನ ಸಮೀಪದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ್ದರು. ಕರೊನಾ ಹಿನ್ನೆಲೆ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಮೈಸೂರು ದಸರಾ ಈ ಬಾರಿ ಅದ್ದೂರಿಯಾಗಿ ನಡೆಯುತ್ತಿದ್ದು, ಗತವೈಭವ ಮರುಕಳಿಸಿದೆ.
ನೀರೆರೆಚಾಟ!: ಮೈಸೂರು ನಗರದ ಚಿಕ್ಕಗಡಿಯಾರ ವೃತ್ತದ ಬಳಿಯ ರಸ್ತೆಬದಿ ಜಂಬೂಸವಾರಿ ವೀಕ್ಷಿಸಲು ಕುಳಿತಿದ್ದ ಜನರು ನೀರೆರೆಚಾಟ ನಡೆಸಿದರು. ನಂದಿಧ್ವಜ ಕುಣಿತ ಬರುತ್ತಿದ್ದಂತೆ ಮೊದಲ ಸಾಲಿನಲ್ಲಿ ಕುಳಿತಿದ್ದ ಕೆಲವರು ಮೇಲೆದ್ದರು. ತಕ್ಷಣ ಕಡೇ ಸಾಲಿನಲ್ಲಿದ್ದವರು ನಮಗೆ ಕಾಣುತ್ತಿಲ್ಲ ಎಂದು ಅವರ ಮೇಲೆ ನೀರು ಎರೆಚಿದರು. ಇದರಿಂದ ಸಿಟ್ಟಾದ ಮೊದಲ ಸಾಲಿನವರೂ ಹಿಂದಿನ ಸಾಲಿನವರ ಮೇಲೆ ನೀರು ಹಾಕಿದರು. ಅಷ್ಟರಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಎಲ್ಲರನ್ನು ಸುಮ್ಮನಿರಿಸಿದರು.