ನ್ಯೂಸ್

ಅಂಬಾರೀಲಿ ಕುಳಿತು ಹಂಪಿ ಗತವೈಭವ ಕಣ್ತುಂಬಿಕೊಳ್ಳುವ ಕಾಲ ಸನ್ನಿಹಿತ: ಪ್ರಾಯೋಗಿಕವಾಗಿ ಡಬಲ್​ ಡೆಕ್ಕರ್​ ಬಸ್​ ಸಂಚಾರ

ವಿಜಯನಗರ: ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕಗಳನ್ನು ಪ್ರವಾಸಿಗರು ಅಂಬಾರಿಯಲ್ಲಿ‌ ಕುಳಿತು ಕಣ್ತುಂಬಿಕೊಳ್ಳುವ ಕಾಲ ಸನಿಹದಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಚರಿಸುವಂತೆ, ಅಂಬಾರಿ ಡಬಲ್​ ಡೆಕ್ಕರ್​ ಬಸ್​ ಸಂಚಾರ ವಿಜಯನಗರದಲ್ಲೂ ಓಡಾಟ ಆರಂಭಿಸಲಿದೆ. ಓಪನ್​ ಟಾಪ್​ ವ್ಯವಸ್ಥೆ ಹೊಂದಿರುವ ಈ ಬಸ್​ನಲ್ಲೇ ಕುಳಿತು ಪ್ರವಾಸಿಗರು ಹಂಪಿಯ ಸೌಂದರ್ಯ ಸವಿಯಬಹುದು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಂಬಾರಿ ಬಸ್ ಅನ್ನು ಹಂಪಿಯಲ್ಲೂ ಪರಿಚಯಿಸುತ್ತಿದ್ದು, ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಸೇರಿದಂತೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಜತೆಗೂಡಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅಂಬಾರಿ ಬಸ್ ಅನ್ನು ಪರಿಚಯಿಸುತ್ತಿದ್ದು, ಹಂಪಿಯಲ್ಲಿ ಈ ಬಸ್ ಸಂಚರಿಸುವಾಗ ವಿದ್ಯುತ್ ತಂತಿ ಹಾಗೂ ಮರ-ಗಿಡಗಳು ಅಡ್ಡಿಯಾಗಲಿವೆಯೇ ಎಂಬುದನ್ನು ಪರಿಶೀಲಿಸಲು ಪ್ರಾಯೋಗಿಕವಾಗಿ ಅಂಬಾರಿ ಬಸ್ ಅನ್ನು ಓಡಿಸಲಾಯಿತು. ಈ ವೇಳೆ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ಆರ್​ಎಫ್​ಒ ವಿನಯ್, ಜೆಸ್ಕಾಂ ಅಧಿಕಾರಿ ಉಮೇಶ್, ಆರ್​ಟಿಒ ಇನ್​ಸ್ಪೆಕ್ಟರ್ ಸಂದೀಪ್ ಮತ್ತಿತರರು ಪ್ರಯಾಣಿಸಿದರು.