ನ್ಯೂಸ್

ಅಗ್ನಿಪಥದ ಅಗ್ನಿಕುಂಡದಲ್ಲಿ ಭಾರತ: ಬಿಹಾರ ಬಿಜೆಪಿ ಅಧ್ಯಕ್ಷರ ಮನೆ ಮೇಲೂ ದಾಳಿ, ಹೈದರಾಬಾದ್​ನಲ್ಲಿ ಓರ್ವ ಸಾವು

ಪಟನಾ: ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರುದ್ಧ ಸೇನಾ ಆಕಾಂಕ್ಷಿಗಳು ಬಿಹಾರದಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ್ದು, ಶುಕ್ರವಾರ ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು ಇದೀಗ ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಸಂಜಯ್​ ಜೈಸ್ವಾಲ್​ ನಿವಾಸದ ಮೇಲೂ ದಾಳಿ ಮಾಡಿದ್ದಾರೆ. ದಾಳಿ ತಡೆಯಲು ಯತ್ನಿಸಿದ ಪೊಲೀಸರ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.

ಅಗ್ನಿಪಥ ಯೋನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಸುಮಾರು 9 ರಾಜ್ಯಗಳಲ್ಲಿ ನಡೆಸುತ್ತಿರುವ ಹೋರಾಟ ಉಗ್ರ ರೂಪ ತಾಳಿದೆ. ರೈಲು, ಬಸ್​ಗಳಿಗೆ ಕಲ್ಲು ತೂಟ ನಡೆಸಿ, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿದ್ದಾರೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸಿ ಹಾನಿಯಾಗಿದೆ. ತೆಲಂಗಾಣದ ಹೈದರಾಬಾದ್​ನಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರತಿಭಟನೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಕುರಿತ ಸಂಪುಟ ಉಪಸಮಿತಿ ಅಗ್ನಿಪಥ ಯೋಜನೆಗೆ ಅನುಮೋದನೆ ನೀಡಿದೆ. ಈ ಸಂಗತಿಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ 46 ಸಾವಿರ ಜನರನ್ನು 4 ವರ್ಷಗಳ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷದಲ್ಲಿ ಆರು ತಿಂಗಳ ತರಬೇತಿ ಅವಧಿಯೂ ಸೇರಿದೆ. ನೇಮಕಾತಿ ಪ್ರಕ್ರಿಯು ಇಂದಿನಿಂದ ಮೂರು ತಿಂಗಳಲ್ಲಿ ಮುಗಿಯಲಿದ್ದು, 2023ರ ಜುಲೈನಲ್ಲಿ ಮೊದಲ ಬ್ಯಾಚ್ ಸೇವೆಗೆ ಸಿದ್ಧವಾಗಲಿದೆ ಎಂದು ಸಿಂಗ್ ಹೇಳಿದರು. ಅರ್ಹತೆ ಆಧಾರದಲ್ಲಿ ಪ್ರತಿ ಬ್ಯಾಚ್​ನಲ್ಲಿ ಶೇ.25ರಷ್ಟು ಯೋಧರಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ ಮತ್ತು ಇಂಥವರು ಅಧಿಕಾರೇತರ ಶ್ರೇಣಿಯಲ್ಲಿ 15 ವರ್ಷ ಸೇವೆ ಸಲ್ಲಿಸಬಹುದು ಎಂದಿದ್ದರು.

ಈ ನೇಮಕಾತಿಯಿಂದ ಸೇನೆಯ ವಾರ್ಷಿಕ ವೆಚ್ಚದಲ್ಲಿ ದೊಡ್ಡ ಉಳಿತಾಯ ಆಗಲಿದೆ. ಸೇನೆಗೆ ಸರ್ಕಾರ ನೀಡುವ ಬಜೆಟ್​ನಲ್ಲಿ ಅರ್ಧದಷ್ಟು ಭಾಗ ವೇತನ ಮತ್ತು ಪಿಂಚಣಿಗೆ ಖರ್ಚಾಗುತ್ತದೆ. ‘ಅಗ್ನಿಪಥ’ ಯೋಜನೆಯಿಂದ ದೊಡ್ಡ ಮಟ್ಟದ ಉಳಿತಾಯ ಸಾಧ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಈ ಯೋಜನೆಯು ಬಿಹಾರದ ಸೇನಾ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಯೋಜನೆ ಕೈಬಿಡಬೇಕೆಂದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಕೇಂದ್ರ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದೆ. ಆದರೂ ಪ್ರತಿಭಟನಾಕಾರರ ಮನಸ್ಸಿಗೆ ಇದು ಇಷ್ಟವಿಲ್ಲ. ಸಂಪೂರ್ಣ ಯೋಜನೆಯನ್ನೇ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ.