ನ್ಯೂಸ್

ನಿತ್ಯಾನಂದ ಗಂಭೀರ ಸ್ಥಿತಿಯಲ್ಲಿದ್ದಾರೆ.. ತುರ್ತು ವೈದ್ಯಕೀಯ ನೆರವು ನೀಡಿ... ಕೈಲಾಸದಿಂದ ಶ್ರೀಲಂಕಾ ಸರ್ಕಾರಕ್ಕೆ ಬಂತು ಪತ್ರ

ಬೆಂಗಳೂರು: ಭಾರತದಿಂದ ಪರಾರಿಯಾಗಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ತನ್ನ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಅಗತ್ಯ ವೈದ್ಯಕೀಯ ಸೌಲಭ್ಯ ನೀಡಿ ಎಂದು ಶ್ರೀಲಂಕಾ ಪ್ರಧಾನಿಗೆ ಪತ್ರ ಬರೆದಿದ್ದಾನೆ. ಅಷ್ಟೇ ಅಲ್ಲ, ಲಂಕಾ ಸರ್ಕಾರ ವೈದ್ಯಕೀಯ ನೆರವು ನೀಡುವುದಾದರೆ ಅಲ್ಲಿಯೇ ಅಪಾರ ಪ್ರಮಾಣದ ಹಣ ಹೂಡುವುದಾಗಿ ಆಫರ್​ ಕೊಟ್ಟಿದ್ದಾನೆ.

'ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರಾದ(SPH) ಪರಮ ಪೂಜ್ಯ ಶ್ರೀ ನಿತ್ಯಾನಂದ ಪರಮಶಿವಂ ಅವರಿಗೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಸದ್ಯ ಕೈಲಾಸದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳುಇ ಖಾಲಿಯಾಗುತ್ತಿದೆ. ನಿತ್ಯಾನಂದ ಅವರಿಗೆ ತುರ್ತು ಚಿಕಿತ್ಸೆ ನೀಡುವ ವೈದ್ಯರ ಅಗತ್ಯವಿದೆ. ಸದ್ಯ ಕೈಲಾಸದಲ್ಲಿಯೇ ಇರುವ ನಿತ್ಯಾನಂದರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ನಿತ್ಯಾನಂದ ಅವರಿಗೆ ರಾಜಾಶ್ರಯ ನೀಡುವ ಮೂಲಕ ತಾವು ತುರ್ತು ಚಿಕಿತ್ಸೆಯ ಸೌಲಭ್ಯ ನೀಡಬೇಕು' ಎಂದು ಲಂಕಾ ಪ್ರಧಾನಿಗೆ ಕೈಲಾಸದ ಮುಖ್ಯಸ್ಥರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆ.7ರಂದು ದ್ವೀಪ ರಾಷ್ಟ್ರದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕರ್ನಾಟಕದ ಬಿಡದಿ ಧ್ಯಾನಪೀಠದಲ್ಲಿರುವುಗಾಲೂ ನಿತ್ಯಾನಂದನ ವಿರುದ್ಧ ಲೈಂಗಿಕ ಕಿರುಕಳ ಆರೋಪ ದಟ್ಟವಾಗಿ ಕೇಳಿಬಂದಿತ್ತು. ನಂತರ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿದ್ದ ಈತ, ದ್ವೀಪವೊಂದನ್ನು ಖರೀದಿಸಿ ಅಲ್ಲಿಯೇ ಕೈಲಾಸ ದೇಶ ನಿರ್ಮಿಸಿಕೊಂಡು ಅಲ್ಲಿಂದಲೇ ಚಿತ್ರ-ವಿಚಿತ್ರ ಸಂದೇಶ ರವಾನಿಸಿ ಸುದ್ದಿಯಲ್ಲಿದ್ದ. ಈ ನಡುವೆ ಕೈಲಾಸದಲ್ಲೂ ಈತನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಕೈಲಾಸದಲ್ಲಿ ಈತ ಕಳ್ಳಾಟ ಆಡುತ್ತಿದ್ದಾನೆ ಎಂದು ವಿದೇಶಿ ಶಿಷ್ಯೆಯೊಬ್ಬಳು ಇಮೇಲ್ ಮೂಲಕ ರಾಮನಗರದ ಬಿಡದಿ ಠಾಣೆ ಪೊಲೀಸರಿಗೆ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು.