ನ್ಯೂಸ್

VIDEO ಕೆಟ್ಟು ಹಾಳಾಗಿ ಹೋಗಿದ್ದಾರೆ ಎಲ್ಲಾ ಪೊಲೀಸ್ರು, ಲಂಚ ತಿನ್ಕೊಂಡು ಬಿದ್ದಿರ್ತಾರೆ ನಾಯಿಹಂಗೆ ಎಂದ ಗೃಹ ಸಚಿವ!

ಬೆಂಗಳೂರು: ಪೊಲೀಸ್ರುಗೂ ಒಂದು ಆತ್ಮಗೌರವ ಇರಬೇಕಲ್ರೀ, ಪೊಲೀಸ್ರಿಗೆ ಸರ್ಕಾರ ಕೈ ತುಂಬಾ ಸಂಬಳ ಕೊಡ್ತಿದೆ, ಯಾರಿಗೇನು ಸಂಬಳದಲ್ಲಿ ಬದುಕ ಬೇಕೆಂದಿಲ್ಲ... ಆದ್ರೂ ಎಂಜಿಲು ಕಾಸು ತೆಗೆದುಕೊಂಡು... ಕೆಟ್ಟು ಹಾಳಾಗಿ ಹೋಗಿದ್ದಾರೆ ಎಲ್ಲಾ ಪೊಲೀಸ್ರು, ಲಂಚ ತಿನ್ಕೊಂಡು ಬಿದ್ದಿರ್ತಾರೆ ನಾಯಿಹಂಗೆ... ಯೋಗ್ಯತೆ ಇಲ್ದಿದ್ರೆ ಯೂನಿಫಾರ್ಮ್​ ಬಿಚ್ಚಿಟ್ಟು ಮನೆಗೆ ಹೋಗ್ಲಿ... ಮಣ್ಣು ಹೊರಲಿ...

ಇದು ಚಿಕ್ಕಮಗಳೂರಿನ ಪೊಲೀಸ್​ ಅಧಿಕಾರಿಯೊಬ್ಬರಿಗೆ ಫೋನ್​ ಮೂಲಕವೇ ಗೃಹ ಸಚಿವ ಆರಗ ಜ್ಞಾನೇಂದ್ರ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡ ಪರಿ. ಅಕ್ರಮ ಗೋಸಾಗಾಣೆ ಪ್ರಕರಣ ನಿಯಂತ್ರಿಸಲು ವಿಫಲವಾಗಿರುವ ಪೊಲೀಸ್​ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಶಿವಮೊಗ್ಗದ ತೀರ್ಥಹಳ್ಳಿಯಿಂದಲೇ ಫೋನ್​ನಲ್ಲಿ ಪೊಲೀಸ್​ ಇಲಾಖೆ ಹಿರಿಯ ಅಧಿಕಾರಿಯೊಂದಿಗೆ ಆಡಿರುವ ಮಾತು ವೈರಲ್​ ಆಗಿದೆ.

ಅಕ್ರಮ ಗೋಸಾಗಣೆ ತಡೆಗಟ್ಟುವ ಪ್ರಯತ್ನ ನಡೆಸಿದ ಇಬ್ಬರನ್ನು ಹತ್ಯೆ ಮಾಡುವ ಯತ್ನ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಸಂಭವಿಸಿದ ಬಳಿಕ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲೇ ಪ್ರತಿಭಟನೆ ನಡೆದಿರುವುದರಿಂದ ಬೇಸರ ಹೊರ ಹಾಕಿರುವ ಸಚಿವರು, ಇಂತಹ ಪೊಲೀಸರನ್ನು ನಂಬಿಕೊಂಡು ಜನ ಬದುಕುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ಪೊಲೀಸರ ಸಹಕಾರದಿಂದಲೇ ಕಸಾಯಿಖಾನೆಗಳು ತಲೆ ಎತ್ತಿವೆ. ಗೋಹತ್ಯೆ ಮತ್ತು ಅಕ್ರಮ ಗೋಸಾಗಣೆ ನಿಯಂತ್ರಿಸದಿದ್ದರೆ ಸಂಬಂಧಪಟ್ಟ ಪೊಲೀಸ್​ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಆಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಗೃಹ ಸಚಿವರು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಎಲ್ಲ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋ ಕಳ್ಳರಿಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾಗಿದ. ಇದರಿಂದ ಗಂಭೀರ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಿಂದ ನನಗೆ ಬೇಸರವಾಗಿದೆ. ಪೊಲೀಸರ ಬಗ್ಗೆ ನನಗೆ ಗೌರವ ಇದೆ. ಎಲ್ಲಾ ಪೊಲೀಸರು ಒಂದೇ ರೀತಿ ಇರುವುದಿಲ್ಲ. ಕರ್ನಾಟಕದಲ್ಲಿ ದಕ್ಷ ಪೊಲೀಸರೂ ಇದ್ದಾರೆ ಎಂದು ಹೇಳಿದರು.