ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಮಾಜಿ ಡಿಸಿಎಂ ತಾರಾ ಚಂದ್ ಸೇರಿದಂತೆ 50ಕ್ಕೂ ಹೆಚ್ಚು ಹಿರಿಯ ಮುಖಂಡರು ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ತಾರಾ ಚಾಂದ್, ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್, ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವರು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಆ.26ರಂದು ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ರಾಜೀನಾಮೆ ಕೊಡುವ ಮೂಲಕ ಕಾಂಗ್ರೆಸ್ಗೆ ಶಾಕ್ ಕೊಟ್ಟಿದ್ದರು. ಆಜಾದ್ರ ದಿಢೀರ್ ರಾಜೀನಾಮೆಯು ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿತ್ತು. ಅಷ್ಟೇ ಅಲ್ಲ, 4 ಪುಟಗಳ ರಾಜೀನಾಮೆ ಪತ್ರದಲ್ಲಿ ಪಕ್ಷ ತೊರೆಯುತ್ತಿರುವ ಕಾರಣವನ್ನೂ ತಿಳಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೂಷಿಸಿದ್ದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ವಯಲದಲ್ಲಿ ಗುರುತಿಸಿಕೊಂಡಿದ್ದ ಗುಲಾಂ ನಬಿ ಆಜಾದ್ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಹಳ ವರ್ಷಗಳಿಂದ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅನುಭವಿ ನಾಯಕ ಆಜಾದ್, ಆ.26ರಂದು ರಾಜೀನಾಮೆ ಪತ್ರವನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದರು. ಇದೀಗ ಇವರ ಹಾದಿಯನ್ನೇ ಹಿಡಿದ 50ಕ್ಕೂ ಹೆಚ್ಚು ಮುಖಂಡರು ಜಂಟಿಯಾಗಿ ರಾಜೀನಾಮೆ ಪತ್ರ ಬರೆದು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಇವರೆಲ್ಲರೂ ಆಜಾದ್ ನೇತೃತ್ವದಲ್ಲಿ ಸ್ಥಾಪನೆಯಾಗಲಿರುವ ಹೊಸ ಪಕ್ಷಕ್ಕೆ ಸೇರಲಿದ್ದಾರೆ.