ಲಂಚ ಕೊಟ್ಟ ಅಭ್ಯರ್ಥಿಯ ತಂದೆಯನ್ನೇ ಶಾಲೆಗೆ ಉಸ್ತುವಾರಿಯನ್ನಾಗಿ ಮಾಡಲು ನಿರ್ಧರಿಸಿದ್ದ ಸಾಹುಕಾರ್
ಯಾದಗಿರಿಯ ಶಹಾಪುರದಲ್ಲಿ ಹೆಂಡತಿ ಹೆಸರಲ್ಲಿದ್ದ ಜಾಗದಲ್ಲಿ 35 ಕೋಟಿ ರೂ. ವೆಚ್ಚದ ಕಾಂಪ್ಲೆಕ್ಸ್ ಪ್ಲಾನ್
10 ಕೋಟಿಗೂ ಹೆಚ್ಚು ನಗದು ವಹಿವಾಟು ನಡೆಸಿದ್ದ ಸಾಹುಕಾರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ
ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಕೋರ್ಟ್, ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ಎಸ್ಐಟಿ ತನಿಖೆ
KPSC irregularities: ಕೆಪಿಎಸ್ಸಿ (KPSC) ಅಕ್ರಮ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಲಂಚದ ದುಡ್ಡಿನಲ್ಲೇ ತಮ್ಮ ಸ್ವಂತ ಊರಿನಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ವೆಚ್ಚದ 'ಡ್ರೀಮ್ ಪ್ರಾಜೆಕ್ಟ್' ಕಟ್ಟಲು ಪ್ಲಾನ್ ಮಾಡಿದ್ದರು ಅನ್ನುವ ಆಘಾತಕಾರಿ ವಿಚಾರವನ್ನು ಜಾರಿ ನಿರ್ದೇಶನಾಲಯ (ED) ಕೋರ್ಟ್ಗೆ ತಿಳಿಸಿದೆ. ಸಾಹುಕಾರ್ ಹಾಗೂ ಮತ್ತೊಬ್ಬ ಆರೋಪಿ ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಇಡಿ ಈ ಸತ್ಯವನ್ನು ಹೊರಹಾಕಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸಾಹುಕಾರ್ ಅವರ ಪತ್ನಿ ಹೆಸರಿನಲ್ಲಿರುವ ಜಾಗದಲ್ಲಿ ಶಾಲೆ, ಹಾಸ್ಟೆಲ್, ಪ್ಲೇಗ್ರೌಂಡ್, ಮಾಲ್ ಹಾಗೂ ಕನ್ವೆನ್ಷನ್ ಹಾಲ್ ಒಳಗೊಂಡ 35 ಕೋಟಿ ರೂ. ವೆಚ್ಚದ ಬೃಹತ್ ಕಾಂಪ್ಲೆಕ್ಸ್ ಕಟ್ಟಲು ನಕ್ಷೆ ರೆಡಿ ಮಾಡಿಸಲಾಗಿತ್ತು. ವಿಶೇಷ ಅಂದ್ರೆ, ಜನವರಿಯಲ್ಲಿ ನಡೆದ ಪಶುವೈದ್ಯರ ಪರೀಕ್ಷೆಯ ಉತ್ತರ ಪತ್ರಿಕೆ ಲೀಕ್ ಮಾಡಲು ಲಂಚ ಕೊಟ್ಟಿದ್ದ ಅಭ್ಯರ್ಥಿಯ ತಂದೆಯನ್ನೇ ಈ ಶಾಲೆಗೆ ಉಸ್ತುವಾರಿಯನ್ನಾಗಿ ಮಾಡಲು ಸಾಹುಕಾರ್ ಡೀಲ್ ಮಾಡಿಕೊಂಡಿದ್ದರು ಎಂದು ತಿಳಿಸಿದೆ.
ಜನವರಿ 9ರಂದು ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಉತ್ತರ ಕೀಗಳನ್ನು 9 ಅಭ್ಯರ್ಥಿಗಳಿಗೆ ಲೀಕ್ ಮಾಡಿ 10 ಲಕ್ಷದಿಂದ 40 ಲಕ್ಷ ರೂ.ವರೆಗೆ ಲಂಚ ಪಡೆಯಲಾಗಿತ್ತು. 3ನೇ ರ್ಯಾಂಕ್ ಅಭ್ಯರ್ಥಿಯ ತಂದೆಯಿಂದ ಸಾಹುಕಾರ್ 10 ಲಕ್ಷ ರೂ. ಪಡೆದಿದ್ದರೆ, 1ನೇ ರ್ಯಾಂಕ್ ಅಭ್ಯರ್ಥಿಯಿಂದ ಗೀತಾ 20 ಲಕ್ಷ ರೂ. ಪಡೆದಿದ್ದರು ಎಂದು ಇಡಿ ಆರೋಪಿಸಿದೆ. ಸಾಹುಕಾರ್ ಮನೆಯಲ್ಲಿ ನಡೆದ ದಾಳಿ ವೇಳೆ ಅಕ್ರಮ ಹಣದ ವಹಿವಾಟು ಹಾಗೂ ಅಭ್ಯರ್ಥಿಗಳ ವಿವರಗಳಿದ್ದ ನೋಟ್ಬುಕ್ ಸಿಕ್ಕಿದೆ. ಅಲ್ಲದೆ, ರಿಯಲ್ ಎಸ್ಟೇಟ್ ಉದ್ಯಮಿ ಎಸ್.ಪಿ. ದಯಾನಂದ್ ಜೊತೆ 10 ಕೋಟಿಗೂ ಹೆಚ್ಚು ನಗದು ವ್ಯವಹಾರ ನಡೆಸಿರೋದು ಬೆಳಕಿಗೆ ಬಂದಿದೆ.
ಸಾಹುಕಾರ್ ಪರ ವಕೀಲರು, 1 ಕೋಟಿಗೂ ಹೆಚ್ಚು ಹಣವನ್ನು ಅವರು ವೈಯಕ್ತಿಕವಾಗಿ ಪಡೆದಿಲ್ಲ ಎಂದು ಜಾಮೀನಿಗೆ ವಾದಿಸಿದರು. ಆದರೆ ಇಡಿ ವಕೀಲರು, ‘ವಹಿವಾಟಿನ ಮೊತ್ತವನ್ನು ಚಾರ್ಜ್ಶೀಟ್ ಹಾಕಿದ ಮೇಲಷ್ಟೇ ನಿರ್ಧರಿಸಬಹುದು, ಇಡೀ ಕೆಪಿಎಸ್ಸಿ ಅಕ್ರಮವನ್ನು ಪರಿಗಣಿಸಬೇಕು’ ಎಂದು ವಿರೋಧಿಸಿದರು. ಇತ್ತ ಗೀತಾ ಪರ ವಕೀಲರು 'ಮಹಿಳೆ' ಎಂಬ ಕಾರಣಕ್ಕೆ ಜಾಮೀನು ಕೋರಿದರೆ, ‘ಅವರು ನಿವೃತ್ತ ಲೋಕಾಯುಕ್ತ ಪ್ರಾಸಿಕ್ಯೂಟರ್, ಎಲ್ಲವೂ ತಿಳಿದೇ ಈ ಅಕ್ರಮ ಮಾಡಿದ್ದಾರೆ’ ಎಂದು ಇಡಿ ತಿರುಗೇಟು ನೀಡಿದೆ. ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಈಗಾಗಲೇ ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸೇರಿದಂತೆ ಹಲವರು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಹೈಕೋರ್ಟ್ ಆದೇಶದಂತೆ ಎಡಿಜಿಪಿ ಆರ್ ಹಿಮೇಂದ್ರ ನೇತೃತ್ವದಲ್ಲಿ ಎಸ್ಐಟಿ (SIT) ಮರುರಚನೆಯಾಗಿದೆ. ನವೆಂಬರ್ 26ರೊಳಗೆ ಸಿಐಡಿ (CID) ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿದೆ.