ನ್ಯೂಸ್

ಸಕಲೇಶಪುರದ ಕಾಫಿ ತೋಟದಲ್ಲಿ ಬ್ರಿಟಿಷರ ಕಾಲದ 28 ಬೆಳ್ಳಿನಾಣ್ಯ ಪತ್ತೆ

ಸಕಲೇಶಪುರ: ತಾಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಭೂಮಿ ಅಗೆಯುವಾಗ ಕೂಲಿ ಕಾರ್ಮಿಕರಿಗೆ ಬ್ರಿಟಿಷರ ಕಾಲದ 28 ಬೆಳ್ಳಿ ನಾಣ್ಯಗಳು ಸಿಕ್ಕಿವೆ.
ರಾಣಿ ವಿಕ್ಟೋರಿಯಾ ಅವರ ಚಿತ್ರವಿರುವ 1860 ರಿಂದ 1904ರಲ್ಲಿ ಟಂಕಿಸಲಾಗಿರುವ 1 ರೂ. ಮುಖಬೆಲೆಯ 28 ನಾಣ್ಯಗಳು ಸಿಕ್ಕಿವೆ. ಇಂದಿನ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಲಕ್ಷಾಂತರ ರೂ. ಇದೆ ಎನ್ನಲಾಗಿದೆ.

15 ದಿನಗಳ ಹಿಂದೆ ಹಾಲೇಬೇಲೂರು ಗ್ರಾಮದ ಶ್ಯಾಮ್​ ಎಂಬುವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಾಟೆಗದ್ದೆ ಗ್ರಾಮದ ಹರೀಶ್​ಗೆ ಬ್ರಿಟಿಷರ ಕಾಲದ ಕೆಲ ನಾಣ್ಯಗಳು ದೊರಕಿದ್ದವರು. ಅವುಗಳನ್ನು ಮಾಲೀಕರಿಗೆ ತಿಳಿಸದೆ ಮನೆಗೆ ತೆಗೆದುಕೊಂಡು ಹೋಗಿ ಶ್ಯಾಮ್​ ಬಚ್ಚಿಟ್ಟಿದ್ದ. ಗ್ರಾಮದಲ್ಲಿ ಕೆಲಸಗಾರರಿಗೆ ನಿಧಿ ಸಿಕ್ಕಿದೆ ಎಂಬ ವದಂತಿ ಹರಡಿದಾಗ ಈ ಕುರಿತು ತೋಟದ ಮಾಲೀಕರು, ಕಾರ್ಮಿಕ ಹರೀಶ್​ನನ್ನು ಕರೆದು ವಿಚಾರಿಸಿದಾಗ ನನಗೆ ಬೆಳ್ಳಿಯಂತಿರುವ ಕೇವಲ 9 ನಾಣ್ಯ ಸಿಕ್ಕಿದೆ ಎಂದು ಹೇಳಿ ಮಾಲೀಕರಿಗೆ ಆ ನಾಣ್ಯಗಳನ್ನು ಒಪ್ಪಿಸಿದ್ದ.

ತಕ್ಷಣ ತೋಟದ ಮಾಲೀಕ ಶ್ಯಾಮ್​, ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ 9 ನಾಣ್ಯಗಳನ್ನು ಪೊಲೀಸರ ವಶಕ್ಕೆ ನೀಡಿದ್ದರು. ಸ್ಥಳಕ್ಕೆ ಬಂದ ಪಿಎಸ್​ಐ ಬಸವರಾಜ್​ ಹಾಗೂ ಸಿಬ್ಬಂದಿಗಳು ಹರೀಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ ನೀಡಿದ ಸುಳಿವು ಆಧರಿಸಿ ವಾಟೆಗದ್ದೆ ಗ್ರಾಮದ ಅವರ ಮನೆಯ ಹಿಂಭಾಗ ಬಿಳಿಬಟ್ಟೆಯಲ್ಲಿ ಸುತ್ತಿಟ್ಟಿದ್ದ 19 ನಾಣ್ಯಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ. ಕಾಮಿರ್ಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಕಾಫಿ ಬೆಳೆಗಾರ ಶ್ಯಾಮ್​ ಒಪ್ಪಿಸಿದ 9 ನಾಣ್ಯಗಳ ಜತೆಗೆ ವಾಟೆಗದ್ದೆಯ ಹರೀಶ್​ ಮನೆಯಿಂದ 19 ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. 1860-1904ರ ನಡುವೆ ಚಲಾವಣೆಯಲ್ಲಿದ್ದ 1 ರೂ. ಮುಖಬೆಲೆಯ ನಾಣ್ಯಗಳ ಮೇಲೆ ರಾಣಿ ವಿಕ್ಟೋರಿಯ ಚಿತ್ರವಿದೆ. ಈ ನಾಣ್ಯಗಳನ್ನು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವಶಕ್ಕೆ ನೀಡಲಾಗುವುದು.
|ಅನಿಲ್​ಕುಮಾರ್​ ಡಿವೈಎಸ್​ಪಿ, ಸಕಲೇಶಪುರ