ಗುಜರಾತ್: ಹದಿನೆಂಟಾಗಿ ವಯಸ್ಕ ಅನಿಸಿಕೊಳ್ಳಲಿಕ್ಕೂ ಈ ಬಾಲಕ ಇನ್ನೂ ಐದು ವರ್ಷ ಕಾಯಬೇಕು. ಹೀಗಿರುವಾಗ ಈತ ಈಗಾಗಲೇ ಬಾಟಲಿಗಟ್ಟಲೆ ಮದ್ಯವನ್ನು ಕದ್ದಿದ್ದಾನೆ. ಇನ್ನು ಈತ ಇವುಗಳನ್ನು ಕದ್ದಿದ್ದು ಎಲ್ಲಿಂದ ಅಂತ ಹೇಳಿದರೆ ಎಂಥವರೂ ಒಮ್ಮೆ ಹುಬ್ಬೇರಿಸಬೇಕು. ಏಕೆಂದರೆ ಪೊಲೀಸ್ ಗೋದಾಮಿಗೇ ಈತ ಕನ್ನ ಹಾಕಿದ್ದ.
ಹೌದು.. 13ರ ವಯಸ್ಸಿನ ಬಾಲಕನೊಬ್ಬ ಪೊಲೀಸರು ವಶಪಡಿಸಿಕೊಂಡ ಮದ್ಯ ದಾಸ್ತಾನಿರಿಸಿದ್ದ ಗೋದಾಮಿಗೆ ಕನ್ನ ಹಾಕಿದ್ದು, ಕೊನೆಗೂ ಈತ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾನೆ. ನಿನ್ನೆ ಬೆಳಗ್ಗೆ ಗೋದಾಮಿಗೆ ನುಗ್ಗಿ ಹೊರಬರುತ್ತಿದ್ದ ಈತನನ್ನು ಕರ್ತವ್ಯದ ಮೇಲಿದ್ದ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಕದ್ದಿರುವ 2 ಬಾಟಲಿ ಬಿಯರ್ ಸಿಕ್ಕಿದೆ.
ಬಳಿಕ ಈತನನ್ನು ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತ ಕಳೆದೊಂದು ವರ್ಷದಿಂದ ಈ ಕೃತ್ಯ ಎಸಗುತ್ತಿರುವುದು ತಿಳಿದುಬಂದಿದೆ. 2022ರ ಏಪ್ರಿಲ್ನಲ್ಲಿ ಮೊದಲ ಸಲ ನಾನು ಈ ಉಗ್ರಾಣಕ್ಕೆ ಹೊಕ್ಕಿದ್ದು, ಅಲ್ಲಿಂದ ಮೇಲಿಂದ ಮೇಲೆ ಕಳವು ಮಾಡುತ್ತಲೇ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ನಂತರ ಈತ ವಾಸಿಸುತ್ತಿದ್ದ ಪೊಲೀಸ್ ಕ್ವಾರ್ಟರ್ಸ್ವೊಂದಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ 29 ಬಾಟಲಿ ಪ್ರೀಮಿಯಂ ವಿಸ್ಕಿ ಸಿಕ್ಕಿತ್ತು. ಜು. 2ರವರೆಗೂ ಈತ 317 ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್, 7 ಟಿನ್ ಪ್ರೀಮಿಯಂ ಬಿಯರ್ ಕಳವು ಮಾಡಿದ್ದು, ಅವುಗಳ ಒಟ್ಟು ಮೌಲ್ಯ 1.7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಅಂದಹಾಗೆ ಗುಜರಾತ್ನ ಜಾಮ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಪೊಲೀಸ್ ಹೆಡ್ಕ್ವಾರ್ಟರ್ಸ್ನ ಸೈಬರ್ ಸೆಲ್ ಕಚೇರಿ ಹಿಂದಿನ ಒಂದು ಬಂಗಲೆಯನ್ನು ಗೋದಾಮು ಥರ ಬಳಸಲಾಗುತ್ತಿದ್ದು, ಅಲ್ಲಿ ವಶಪಡಿಸಿಕೊಂಡ ಆಲ್ಕೋಹಾಲ್ ಕೂಡಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.