ನ್ಯೂಸ್

ಎಸ್‌ಟಿಪಿ ಗುಂಡಿಗೆ ಬಿದ್ದು 10 ವರ್ಷದ ಬಾಲಕಿ ಸಾವು

ಬೆಂಗಳೂರು: ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ)ದ ಗುಂಡಿಗೆ 10 ವರ್ಷದ ಬಾಲಕಿ ಬಿದ್ದು ಮೃತಪಟ್ಟಿದ್ದಾಳೆ.
ಎಲೆಕ್ಟ್ರಾನಿಕ್‌ಸಿಟಿ ಸೆಲಿಬ್ರಿಟಿ ಪ್ಯಾರಡೈಸ್ ಲೇಔಟ್ ನಿವಾಸಿ ಎಲಿಸಾ ನೆಫ್ಚಾ(೧೦) ಮೃತ ಬಾಲಕಿ. ಶನಿವಾರ ಸಂಜೆ ಸುಮಾರು ೬.೩೦ಕ್ಕೆ ಸೆಲಿಬ್ರಿಟಿ ಪ್ಯಾರಡೈಸ್ ಲೇಔಟ್‌ನ ಮೈದಾನದ ಎಸ್‌ಟಿಪಿ ಘಟಕದಲ್ಲಿ ಈ ದುರ್ಘಟನೆ ನಡೆದಿದೆ.
ಮೃತ ಬಾಲಕಿ ಎಲಿಸಾ ನೆಫ್ಚಾ ಡಾರ್ಜಿಲಿಂಗ್ ಮೂಲದ ಅಗಸ್ತಯ ಮತ್ತು ಭಿಗಿತಾ ದಂಪತಿಯ ಪುತ್ರಿ. ದಂಪತಿಗೆ ನಾಲ್ವರು ಹೆಣ್ಣು ಮತ್ತು ಒಂದು ಗಂಡು ಸೇರಿ ಒಟ್ಟು ಐವರು ಮಕ್ಕಳು ಇದ್ದಾರೆ. ಈ ಪೈಕಿ ಮೃತ ಎಲಿಸಾ ನೆಫ್ಚಾ ನಾಲ್ಕನೇ ಪುತ್ರಿ. ದಂಪತಿ ಕೆಲ ವರ್ಷಗಳಿಂದ ತಮ್ಮ ಐವರು ಮಕ್ಕಳೊಂದಿಗೆ ಎಲೆಕ್ಟ್ರಾನಿಕ್ ಸಿಟಿಯ ಸೆಲಿಬ್ರಿಟಿ ಪ್ಯಾರಡೈಸ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಹೋಟೆಲ್‌ನಲ್ಲಿ ಕೆಲಸ ಮಾಡುವ ದಂಪತಿ ಎಂದಿನಂತೆ ಶನಿವಾರ ಕೆಲಸಕ್ಕೆ ತೆರಳಿದ್ದರು. ಸಂಜೆ ಎಲಿಸಾ ನೆಫ್ಚಾ ಸೇರಿ ಅಕ್ಕಪಕ್ಕದ ಮನೆಗಳ ನಾಲ್ಕೈದು ಮಕ್ಕಳು ಮನೆಯ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಮೈದಾನದ ಒಂದು ಮೂಲೆಯಲ್ಲಿರುವ ಎಸ್‌ಟಿಪಿ ಘಟಕದ ಬಳಿ ತೆರಳಿರುವ ಎಲಿಸಾ ನೆಫ್ಚಾ ಆಯಾ ತಪ್ಪಿ ಸುಮಾರು ೧೪ ಅಡಿ ಆಳದ ಎಸ್‌ಟಿಪಿ ಗುಂಡಿಗೆ ಬಿದ್ದಿದ್ದಾಳೆ.
ಈ ವೇಳೆ ಜತೆಯಲ್ಲಿದ್ದ ಮಕ್ಕಳು ಜೋರಾಗಿ ಚೀರಿದ್ದಾರೆ. ಬಳಿಕ ಮೈದಾನದಲ್ಲಿ ವಾಯು ವಿಹಾರದಲ್ಲಿ ತೊಡಗಿದ್ದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಬಾಲಕಿಯನ್ನು ಎಸ್‌ಟಿಪಿ ಗುಂಡಿಯಿಂದ ಮೇಲಕ್ಕೆ ಎತ್ತಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಎಲಿಸಾ ನೆಫ್ಚಾ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.