ನ್ಯೂಸ್

ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಎರಡ್ಮೂರು ದಿನದಲ್ಲಿ 1 ಲಕ್ಷ ರೂ. ಪರಿಹಾರ ಬಿಡುಗಡೆ: ಬೊಮ್ಮಾಯಿ

ಬೆಂಗಳೂರು: ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ಒಂದು ಲಕ್ಷ ರೂಪಾಯಿ ಪರಿಹಾರದ ಹಣ ಇನ್ನು ಎರಡ್ಮೂರು ದಿನದಲ್ಲಿ ಬಿಡುಗಡೆ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಯಾರಾದರೂ ಮಹಾಮಾರಿ ಕರೊನಾಗೆ ಬಲಿಯಾದರೆ, ಅಂತಹವರ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಕಳೆದ ಜೂನ್​ ತಿಂಗಳಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಮೂರು ತಿಂಗಳಾದರೂ ಪರಿಹಾರ ಹಣ ಮೃತರ ಕುಟುಂಬಸ್ಥರ ಕೈಗೆ ಸೇರಿರಲಿಲ್ಲ. ಈ ಕುರಿತು ಸೋಮವಾರ ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಈವರೆಗೆ ಒಟ್ಟು 7ರಿಂದ 8 ಸಾವಿರ ಬಿಪಿಎಲ್​ ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ನೇರವಾಗಿ ಅವರ ಖಾತೆಗೆ ಎರಡ್ಮೂರು ದಿನದಲ್ಲಿ ಹಣ ಜಮೆ ಮಾಡಲಾಗುವುದು ಎಂದರು.

ಕೋವಿಡ್​ನಿಂದ ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದು, ಆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಶೀಘ್ರವೇ ಪರಿಹಾರ ನೀಡಿದರೆ ಆ ಕುಟುಂಬಕ್ಕೆ ತುಸು ಆರ್ಥಿಕ ಚೇತರಿಕೆ ಸಿಗಬಹುದು.