Teacher teaching students in the classroom scene illustration 
ನ್ಯೂಸ್

ಪ್ರಥಮ ದರ್ಜೆ ಕಾಲೇಜುಗಳಿಗೆ 997 ಅತಿಥಿ ಉಪನ್ಯಾಸಕರ ನೇಮಕ

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು 2024-25ನೇ ಸಾಲಿನ ಬಾಕಿ ಉಳಿದ ಅವಧಿಗೆ ತಾತ್ಕಾಲಿಕವಾಗಿ 997 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದೆ.

ಇಲಾಖಾ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ.

ಹಿಂದಿನ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದವರನ್ನು ಈಗಾಗಲೇ ಲಭ್ಯವಿರುವ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರಿಸಲಾಗಿದೆ. ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಪ್ರಸ್ತುತ ಸಾಲಿನಲ್ಲಿ ಹೆಚ್ಚುವರಿ ಕಾರ್ಯಭಾರ ಲಭ್ಯವಿರುವ ವಿಷಯಗಳಿಗೆ ಮಾತ್ರ ಕೌನ್ಸೆಲಿಂಗ್ ನಡೆಸಲಾಗಿದೆ.

ಕೌನ್ಸೆಲಿಂಗ್ ಮೂಲಕ ಆಐಕೆಯಾದ ಅಭ್ಯರ್ಥಿಗಳ ವಿಷಯವಾರು ಆಯ್ಕೆಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಉಪನ್ಯಾಸಕರು ಮೂರು ದಿನದೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಅಭ್ಯರ್ಥಿಗಳ ಮೂಲದಾಖಲಾತಿಗಳನ್ನು ಪರಿಶೀಲಿಸಿ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಲಾಗಿದೆ. ಆಯ್ಕೆಯಾದವರನ್ನು ಆಗಸ್ಟ್ 2ರವರೆಗೆ ಮಾತ್ರ ಮುಂದುವರಿಸಲು ಸೂಚಿಸಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಪರೀಕ್ಷಾ ಕಾರ್ಯಕ್ಕೆ ಹಾಜರಾಗಲು ಒಂದು ಸೆಮಿಸ್ಟರ್‌ನಲ್ಲಿ 5 ದಿನಗಳಂತೆ ಎರಡು ಸೆಮಿಸ್ಟರ್‌ಗಳಲ್ಲಿ ಒಟ್ಟು 10 ದಿನಗಳಿಗೆ ಅವಕಾಶ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.