ಮುಂಬೈ: ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದು ಎರಡು ವರ್ಷಗಳಾಗುತ್ತ ಬಂದಿದ್ದು, ಈವರೆಗೆ 98.24ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಹೇಳಿದೆ. 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್ಬಿಐ 2023ರ ಮೇ 19ರಂದು ಪ್ರಕಟಿಸಿತ್ತು. ಆದಾಗ್ಯೂ, ಇನ್ನೂ ಕೆಲ ನೋಟುಗಳು ಚಲಾವಣೆಯಲ್ಲಿವೆ. 2023ರ ಮೇ 19ರಂದು ಚಲಾವಣೆ ರದ್ದುಪಡಿಸಿದಾಗ ಚಾಲ್ತಿಯಲ್ಲಿದ್ದ 2 ಸಾವಿರ ಮುಖಬೆಲೆಯ ನೋಟುಗಳ ಮೊತ್ತ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. 2025ರ ಏಪ್ರಿಲ್ 30ರ ವೇಳೆಗೆ 6,266 ಕೋಟಿ ರೂ. ಗೆ ಇಳಿದಿದೆ. 2 ಸಾವಿರ ಮುಖಬೆಲೆಯ ನೋಟುಗಳ ಪೈಕಿ ಈವರೆಗೆ ಶೇಕಡ 98.24ರಷ್ಟು ನೋಟುಗಳು ವಾಪಸ್ ಬಂದಿವೆ ಎಂದೂ ಆರ್ಬಿಐ ಹೇಳಿದೆ.
ಗ್ರಾಹಕರು ತಮ್ಮ ಬಳಿ ಇರುವ 2000 ರೂ. ಮುಖಬೆಲೆಯ ನೋಟುಗಳನ್ನು ಎಲ್ಲ ಬ್ಯಾಂಕ್ಗಳಲ್ಲಿ ಬದಲಿಸಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಿಕೊಳ್ಳಲು 2023ರ ಅಕ್ಟೋಬರ್ 7ರವರೆಗೆ ಅವಕಾಶವಿತ್ತು. ಪ್ರಸ್ತುತ ದೇಶದ 19 ಸ್ಥಳಗಳಲ್ಲಿರುವ ಆರ್ಬಿಐ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯ ಇದೆ.