ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ/ನೌಕರರ ಮೇಲೆ ಹೆಚ್ಚುತ್ತಿರುವ ಒತ್ತಡ(96% of PDOs' performance is due to political pressure!)ಕುರಿತು ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿ ನಡೆಸುತ್ತಿರುವ ಸಭೆಗಳಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿ/ನೌಕರರ ಮೇಲಿನ ಒತ್ತಡ ಅಧ್ಯಯನ ಸಮಿತಿ ಅಧ್ಯಕ್ಷ ಡಾ.ಮೀನಾಕ್ಷಿ ಸುಂದರಂ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಒತ್ತಡದ ಪ್ರಮಾಣ ಶೇ.96! ರಷ್ಟಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕರ್ನಾಟಕ ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆ ವರದಿಯನ್ನು ಉಲ್ಲೇಖಿಸಿ, ಕೆಲಸದ ಒತ್ತಡ ಶೇ.84, ಸಹದ್ಯೋಗಿಗಳ ಅಸಹಕಾರ ಶೇ.70, ಸಹೋದ್ಯೋಗಿಗಳ ಸಹಭಾಗಿತ್ವದ ಕೊರತೆ ಶೇ.62, ಸಮಯಾವಕಾಶದ ಕೊರತೆ ಶೇ.57, ಬಡ್ತಿ ಅವಕಾಶಗಳ ಕೊರತೆ ಶೇ.50, ಮಾಹಿತಿ ಮತ್ತು ಸಂವಹನದ ಅಂತರ ಶೇ.49, ಮಾರ್ಗದರ್ಶನದ ಕೊರತೆ ಶೇ.47 ಹಾಗೂ ಗ್ರಾಮ ಪಂಚಾಯಿತಿ ನೌಕರರ ಅನಿಯಮಿತ ವರ್ಗಾವಣೆ ಶೇ.31 ರಷ್ಟಿದೆ ಎಂಬ ಅಂಶಗಳನ್ನು ಚರ್ಚಿಸಲಾಗಿದೆ.
ಗ್ರಾಪಂ ಸ್ವಂತ ಸಂಪನ್ಮೂಲ ಬಳಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮತ್ತು ಪಿಡಿಒಗಳ ದೃಷ್ಟಿಕೋನ ಹೊಂದಾಣಿಕೆ ಇಲ್ಲದಿರುವುದರಿಂದ ಕಾರ್ಯನಿರ್ವಹಣೆಯಲ್ಲಿ ಒತ್ತಡ ಉಂಟಾಗುತ್ತಿರುವುದನ್ನು ಗುರುತಿಸಲಾಗಿದೆ.
ಗ್ರಾಪಂಗಳಲ್ಲಿ ಪಿಡಿಒಗಳು ಬಟವಾಡೆ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಒತ್ತಡ ಇರುವುದು ಕಂಡು ಬಂದಿದೆ.
ಹಲ್ಲೆ ವಿವರ: ಕೋಲಾರ, ವಿಜಯಪುರ, ತುಮಕೂರು, ಕೊಪ್ಪಳ, ಕೊಡಗು, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಲ್ಲಿ ಪಿಡಿಒಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ ಕುರಿತು ಆಯಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ.
ಹೆಚ್ಚುತ್ತಿರುವ ಹಲ್ಲೆಗಳಿಂದ ಅಧಿಕಾರಿಗಳು/ನೌಕರರು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಪ್ರಕರಣಗಳ ಗಂಭೀರತೆ ಅರಿತು ಸರ್ಕಾರ ಅಧಿಕಾರಿ/ನೌಕರರ ಹಿತರಕ್ಷಣೆಗಾಗಿ ಹಲ್ಲೆ, ದೌರ್ಜನ್ಯ ಎಸಗುವವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ ಸರ್ಕಾರವನ್ನು ಆಗ್ರಹಿಸಿದ್ದಾರೆ.