ನ್ಯೂಸ್

ಲಾಕ್‌ಡೌನ್‌ನಿಂದ ಹೆಚ್ಚಾಯ್ತೆ ವಿಕೃತಿ? ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಎರಡೇ ದಿನಗಳಲ್ಲಿ ಶೇ.95ರಷ್ಟು ಹೆಚ್ಚಳ! ಜಾಲತಾಣಗಳಿಗೆ ನೋಟಿಸ್‌

ನವದೆಹಲಿ: ಲಾಕ್‌ಡೌನ್‌ನಿಂದ ಮನುಷ್ಯ ಕಲಿತದ್ದು ಅನೇಕ ಸಂಗತಿಗಳಿದ್ದರೂ, ಅದೇ ಇನ್ನೊಂದೆಡೆ ಆತನ ವಿಕೃತಿಯೂ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿದೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೀಡಿರುವ ಆತಂಕಕಾರಿ ವರದಿ.

ಮಾರ್ಚ್‌ 24 ರಿಂದ ಮಾರ್ಚ್‌ 26ರ ನಡುವೆ ಎಂದರೆ ಎರಡೇ ದಿನಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಜಗತ್ತಿನಾದ್ಯಂತ ಶೇ.95ರಷ್ಟು ಹೆಚ್ಚಾಗಿದೆ ಎಂದು ಆಯೋಗ ವರದಿ ನೀಡಿದೆ.
ಲಾಕ್‌ಡೌನ್‌ ಸಮಯಕ್ಕಿಂತ ಮುಂಚೆ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆಯ ಪ್ರಮಾಣಕ್ಕೆ ಈ ಎರಡೇ ದಿನಗಳ ವೀಕ್ಷಣೆಯ ಲೆಕ್ಕಾಚಾರ ಹಾಕಿದಾಗ ಈ ಭಯಾನಕ ಅಂಶ ಆಯೋಗಕ್ಕೆ ಕಂಡುಬಂದಿದೆ! ಪೋರ್ನ್‌ ವೆಬ್‌ಸೈಟ್‌ಗಳ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಅಧಿಕವಾಗಿರುವುದಾಗಿ ಆಯೋಗ ಹೇಳಿದೆ.

ಇದು ಎರಡು ದಿನಗಳ ಮಾತಾದರೆ, ಅದರ ನಂತರವೂ ದಿನದಿಂದ ದಿನಕ್ಕೆ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚುತ್ತಲೇ ಇದೆ. ಇದು ಅತ್ಯಂತ ಕಳವಳಕಾರಿ ವಿಷಯ ಎಂದು ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಗೂಗಲ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್‌ ನೀಡಿದೆ. ಕೆಲವೊಂದು ಷರತ್ತು, ನಿಬಂಧನೆ, ನಿಯಮಗಳು ಇದ್ದರೂ ಈ ರೀತಿ ಸುಲಭದಲ್ಲಿ ವೀಕ್ಷಣೆ ಹೇಗೆ ಸಾಧ್ಯವಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಆಯೋಗ ಇವುಗಳಿಗೆ ಸೂಚಿಸಿದೆ.

ಭಾರತ ಸೇರಿದಂತೆ ವಿದೇಶಿ ಪೋರ್ನ್‌ ಸೈಟ್‌ಗಳ ಮೂಲಕ ಜನರು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು ಈ ಸಮಯದಲ್ಲಿ ನೋಡಿದ್ದು, ಲಾಕ್‌ಡೌನ್‌ ಮುಂದುವರಿಕೆಯ ಭಾಗವಾಗಿ, ಇನ್ನೂ ಅಧಿಕ ಸಂಖ್ಯೆಯಲ್ಲಿ ಜನರ ವೀಕ್ಷಣೆ ಹೆಚ್ಚುತ್ತಿದೆ. ಇದು ತುಂಬಾ ಆತಂಕಕಾರಿ ಬೆಳವಣಿಗೆ ಎಂದು ಆಯೋಗ ಹೇಳಿದೆ.

ನೋಡುವುದು ಹೆಚ್ಚಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ಆತಂಕ ವ್ಯಕ್ತಪಡಿಸಿದೆ. ಕೆಲವೊಂದು ವಾಟ್ಸ್‌ಆ್ಯ‍ಪ್‌ ಗ್ರೂಪ್‌ನಲ್ಲಿ ಇಂಥ ವೀಡಿಯೋಗಳು ಹರಿದಾಡುತ್ತಿರುವ ಕಾರಣ, ಇಷ್ಟೊಂದು ಪ್ರಮಾಣದಲ್ಲಿ ವೀಕ್ಷಣೆ ಹೆಚ್ಚಾಗಿದೆ. ಈ ಮೂಲಕ ಟ್ವಿಟರ್‌ನಲ್ಲಿಯೂ ವೀಡಿಯೋಗಳು ಸುಲಭದಲ್ಲಿ ಶೇರ್‌ ಆಗುತ್ತಿತ್ತು, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಕಾರಣಗಳನ್ನು ನೀಡುವಂತೆ ನೋಟಿಸ್‌ನಲ್ಲಿ ಕೇಳಲಾಗಿದೆ. ಏಪ್ರಿಲ್‌ 30ರ ಒಳಗೆ ಪ್ರತಿಕ್ರಿಯಿಸಬೇಕೆಂದು ಸೂಚಿಸಿದೆ (ಏಜೆನ್ಸೀಸ್‌)