ಬೆಂಗಳೂರು ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ನಡೆಸಿರುವ ಸಮೀಕ್ಷೆಯಲ್ಲಿ ಶೇ.94 ವಿದ್ಯಾರ್ಥಿಗಳು 4 ವರ್ಷದ ಪದವಿಯನ್ನು ತಿರಸ್ಕರಿಸಿದ್ದಾರೆ.
ಕರ್ನಾಟಕಕ್ಕೆ ಕರಡು ಜನಪರ ಶಿಕ್ಷಣ ನೀತಿ ಮತ್ತು ಕರ್ನಾಟಕದಲ್ಲಿ ಎನ್‌ಇಪಿ-2020 ಜಾರಿಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ನಡೆಸಿರುವ ವಿಶಿಷ್ಟ ಸಮೀಕ್ಷೆಯ ವರದಿಯನ್ನು ಬುಧವಾರ ಕರ್ನಾಟಕ ರಾಜ್ಯ ಶಿಕ್ಷಣ ಆಯೋಗಕ್ಕೆ ಸಲ್ಲಿಸಲಾಯಿತು. ಬಳಿಕ ಗಾಂಧಿ ಭವನದಲ್ಲಿ ಸಭೆ ಸಮಾವೇಶ ನಡೆಸಿ ಸಮೀಕ್ಷೆ ಕುರಿತು ಚರ್ಚಿಸಲಾಯಿತು.
ಸಮೀಕ್ಷೆಯಲ್ಲಿ ಶೇ.94.5ರಷ್ಟು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನಾಲ್ಕು ವರ್ಷದ ಪದವಿಯನ್ನು ತಿರಸ್ಕರಿಸಿದ್ದಾರೆ. ಬಹುಪ್ರವೇಶ ಮತ್ತು ಬಹುನಿರ್ಗಮನ ಪದ್ಧತಿಯಿಂದ ಉದ್ಯೋಗ ಪಡೆಯುವಲ್ಲಿ ಯಾವುದೇ ಸಹಾಯ ಆಗುವುದಿಲ್ಲ ಎಂದು ಶೇ. 92.32 ಜನ ಅಭಿಪ್ರಾಯಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಸಮಾವೇಶದಲ್ಲಿ ಮಾತನಾಡಿದ ಸೇಂಟ್ ಜೋಸ್ೆ ವಿಶ್ವವಿದ್ಯಾಲಯ ಕುಲಪತಿ ಡಾ. ವಿಕ್ಟರ್ ಲೋಬೋ, ರಾಜ್ಯ ಹೊಸ ಶಿಕ್ಷಣ ನೀತಿಯು ಶಿಕ್ಷಣ ಪ್ರಜಾಸತಾತ್ಮಕ, ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕವಾಗಿ ಇರುವಂತೆ ನೋಡಿಕೊಳ್ಳಬೇಕಿದೆ. ಶಿಕ್ಷಣದ ಜವಾಬ್ದಾರಿಯು ನುರಿತ ವ್ಯಕ್ತಿಗಳನ್ನು ಸೃಷ್ಟಿಸುವುದಲ್ಲ. ಬದಲಾಗಿ ಕ್ರಿಯಾತ್ಮಕ ಹಾಗೂ ವಿಮರ್ಶಾತ್ಮಕ ಚಿಂತನೆಯುಳ್ಳ ವ್ಯಕ್ತಿಗಳನ್ನು ಸೃಷ್ಟಿಸುವುದು. ಸಮಾಜವಾದಿ ಶಿಕ್ಷಣ ವ್ಯವಸ್ಥೆಯಿಂದ ಸ್ಫೂರ್ತಿ ಪಡೆದು ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣ ಖಾತ್ರಿಪಡಿಸಲು ಮುಂದಾಗಬೇಕಿದೆ ಎಮದು ಹೇಳಿದರು.
ಸಾಹಿತಿ ಪ್ರೊ.ಸಬಿತಾ ಬನ್ನಾಡಿ ಮಾತನಾಡಿ, ಭಾರತದಲ್ಲಿನ ವಿವಿಧತೆ ಹಾಗೂ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ಏಕರೂಪ ಶಿಕ್ಷಣ ನೀತಿ ಹೆಸರಿನಲ್ಲಿ ಎನ್‌ಇಪಿ ರಚಿಸಲಾಗಿದೆ. ಈ ನೀತಿಯನ್ನು ರಾಜ್ಯದಲ್ಲಿ ತಲೆಕೆಳಗಾಗಿ ಅಂದರೆ ಶಾಲಾ ಶಿಕ್ಷಣ ಬಿಟ್ಟು ಪದವಿ ಶಿಕ್ಷಣದಲ್ಲಿ ಜಾರಿಗೊಳಿಸಿರುವುದು ಅತ್ಯಂತ ಖೇದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು,ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ಸೇರಿ ಹಲವರು ಉಪಸ್ಥಿತರಿದ್ದರು.