ಬೆಂಗಳೂರು: ದ್ವಿಚಕ್ರ ವಾಹನ ಮೇಲಿದ್ದ ಅಪರಿಚಿತ ಬಾಕ್ಸ್‌ನಲ್ಲಿ ಸಿಕ್ಕ 94 ಲಕ್ಷ ರೂ.ಅನ್ನು ಮನೆಗೆ ಕೊಂಡೊಯ್ದು ಯುವಕ, ಖರ್ಚು ಮಾಡುವ ಬಗ್ಗೆ ಯೋಚಿಸುತ್ತಿರುವಾಗ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇಂತಹದೊಂದು ವಿಚಿತ್ರ ಪ್ರಕರಣ ಚಂದ್ರಾ ಲೇಔಟ್‌ನಲ್ಲಿ ನಡೆದಿದೆ. ಗಿರಿನಗರ ಬಳಿಯ ಶ್ರೀನಗರ ನಿವಾಸಿ ವರುಣ್ (25) ಬಂಧಿತ. ಬ್ಯಾಂಕ್‌ಯೊಂದರ ಕ್ರೆಡಿಟ್ ಕಾರ್ಡ್ ವೆರಿಫಿಕೇಷನ್ ಮ್ಯಾನೇಜರ್ ಆಗಿ ವರುಣ್ ಕೆಲಸ ಮಾಡುತ್ತಿದ್ದಾನೆ. ಈತನಿಂದ 94 ಲಕ್ಷ ರೂ.ಅನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದಾಗಿ ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಚಂದ್ರಾಲೇಔಟ್ ನಿವಾಸಿ ಪ್ರಮೋದ್ ಎಂಬಾತ ಸೈಟ್ ಖರೀದಿಸಬೇಕೆಂದು 94 ಲಕ್ಷ ರೂ. ಕೂಡಿಟ್ಟಿದ್ದರು. ಹಣ ಏಣಿಸಬೇಕೆಂದು ಸ್ನೇಹಿತನ ಅಂಗಡಿಗೆ ಹೋಗಲು ಬಾಕ್ಸ್‌ನಲ್ಲಿ ನಗದು ತುಂಬಿಕೊಂಡು ಮಾರ್ಗ ಮಧ್ಯೆ ಸೈಟ್ ದಾಖಲೆ ಪತ್ರಗಳನ್ನು ವಕೀಲರಿಗೆ ತೋರಿಸಿ ಅಭಿಪ್ರಾಯ ಕೇಳಲು ಸಹ ಮುಂದಾಗಿದ್ದರು.
ಮನೆಯಿಂದ ಹಣದ ಬಾಕ್ಸ್ ಮತ್ತು ದಾಖಲೆ ಪತ್ರಗಳಿದ್ದ ಬ್ಯಾಗ್ ತಂದ ಪ್ರಮೋದ್, ಕಾರಿನ ಲಾಕ್ ಓಪನ್ ಮಾಡಲು ಹಣದ ಬಾಕ್ಸ್‌ನ್ನು ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನದ ಮೇಲಿಟ್ಟಿದ್ದ. ಲಾಕ್ ಓಪನ್ ಮಾಡಿದ ಮೇಲೆ ದಾಖಲೆ ಪತ್ರಗಳ ಬ್ಯಾಗ್‌ನ್ನು ಕಾರಿಗೆ ಹಾಕಿಕೊಂಡು ವಕೀಲರ ಕಚೇರಿಗೆ ಹೋಗಿದ್ದರು. ಹಣದ ಬಾಕ್ಸ್ ಮರೆತಿದ್ದ. ಇತ್ತ ವರುಣ್, ತನ್ನ ದ್ವಿಚಕ್ರ ವಾಹನದ ಬಳಿಗೆ ಬಂದಾಗ ಅದರ ಮೇಲಿದ್ದ ಬಾಕ್ಸ್‌ನ್ನು ಆಶ್ಚರ್ಯದಿಂದ ತೆಗೆದು ನೋಡಿದಾಗ ಹಣದ ಕಂತೆ ಕಂತೆಗಳು ಕಂಡಿವೆ.
ಸುತ್ತಮುತ್ತ ನೋಡಿದ ವರುಣ್, ಯಾರು ಇಲ್ಲದೆ ಇರುವುದನ್ನು ಗಮನಿಸಿ ಹಣದ ಬಾಕ್ಸ್‌ನೊಂದಿಗೆ ಶ್ರೀನಗರದ ಮನೆಗೆ ಹೋಗಿದ್ದ. ವಕೀಲರ ಕಚೇರಿಗೆ ಹೋದ ಮೇಲೆ ಹಣದ ಬಾಕ್ಸ್ ನೋಡಿಕೊಂಡ ಪ್ರಮೋದ್, ಆತಂಕಗೊಂಡು ವಾಪಸ್ ಮನೆ ಬಳಿಗೆ ಬಂದು ನೋಡಿದಾಗ ಹಣದ ಬಾಕ್ಸ್ ಇರಲಿಲ್ಲ, ದ್ವಿಚಕ್ರ ವಾಹನವೂ ಕಾಣಿಸಿರಲಿಲ್ಲ. ದಿಕ್ಕು ತೋಚದೆ ಚಂದ್ರಾ ಲೇಔಟ್ ಠಾಣೆಗೆ ಪ್ರಮೋದ್ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಪೊಲೀಸರು, ಪ್ರಮೋದ್ ಮನೆ ಮತ್ತು ರಸ್ತೆ ಅಕ್ಕಪಕ್ಕದಲ್ಲಿ ಅಳವಡಿಸಿದ್ದ 300ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದಾಗ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಮತ್ತು ವಾಹನ ಸಾಗಿದ ಮಾರ್ಗ ಲಭ್ಯವಾಗಿತ್ತು. ಇದರ ಜಾಡು ಹಿಡಿದು ವರುಣ್ ಮನೆಗೆ ತೆರಳಿ ಪೊಲೀಸರು ವಿಚಾರಣೆ ನಡೆಸಿದಾಗ ಹಣ ಪತ್ತೆಯಾಗಿದೆ. ತನ್ನದಲ್ಲದ ಹಣ ಸಿಕ್ಕಿರುವ ಬಗ್ಗೆ ಪೊಲೀಸರಿಗೆ ಅಥವಾ ವಾರಸುದಾರರಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಯಾವುದನ್ನು ಮಾಡದೆ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪದ ಮೇಲೆ ವರುಣ್‌ನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.
ಇನೊವಾ ಕಾರು ಖರೀದಿಗೆ ಪ್ಲಾನ್ :
ಬಯಸದೆ ಬಂದ ಭಾಗ್ಯವೆಂದು 94 ಲಕ್ಷ ರೂ. ಸಿಕ್ಕ ಹಿನ್ನೆಲೆಯಲ್ಲಿ ವರುಣ್, ಅಷ್ಟೊಂದು ಹಣ ಏನು ಮಾಡಬೇಕೆಂದು ಗೊಂದಲಕ್ಕೆ ಒಳಗಾಗಿ ಐದು ದಿನಗಳು ಕಳೆದಿದ್ದ. ಸೆಕೆಂಡ್ ಹ್ಯಾಂಡ್ ಇನ್ನೊವಾ ಕಾರು ಖರೀದಿ ಮಾಡಲು ಪ್ಲಾನ್ ಮಾಡಿದ್ದ. 6ನೇ ದಿನಕ್ಕೆ ಪೊಲೀಸರು, ಸಿಸಿ ಕ್ಯಾಮರಾ ಜಾಡು ಹಿಡಿದು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಕಂಡ ಕನಸ್ಸುಗಳು ಕನಸಾಗಿಯೇ ಉಳಿಯುವಂತೆ ಮಾಡಿತು. ಅದೇ ಹಣವನ್ನು ವರುಣ್, ಸಂಬಂಧಪಟ್ಟವರಿಗೆ ಒಪ್ಪಿಸಿದ್ದರೇ ಸಮಾಜಕ್ಕೆ ಮಾದರಿಯಾಗಿ ಉಳಿಯುತ್ತಿದ್ದ.