ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 921 ಸೋಂಕು ಪ್ರಕರಣಗಳು ವರದಿಯಾಗಿದ್ದು ಎರಡನೇ ಅಲೆ ಆರಂಭದ ಸೂಚನೆ ನೀಡಿದೆ.
ಮಾರ್ಚ್ ತಿಂಗಳ ಆರಂಭದೊಂದಿಗೆ ಸೋಂಕು ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, 12 ದಿನಗಳ ಅವಧಿಯಲ್ಲಿ 8,087 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 622 ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಮಾಣ ಶೇ. 1.26ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 9.58 ಲಕ್ಷ ದಾಟಿದೆ.
ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 8,042ಕ್ಕೆ ಹೆಚ್ಚಳವಾಗಿದೆ. ಮತ್ತೊಂದೆಡೆ ಸೋಂಕಿಗೆ ಕೇವಲ (ಮೈಸೂರು) ಒಬ್ಬರು ಸಾವನ್ನಪ್ಪಿದ್ದು, ದಿನದ ಮೃರಣ ಪ್ರಮಾಣ ದರ ಶೇ. 0.10ಕ್ಕೆ ಕುಸಿದೆ. ಈವರೆಗೂ ಮೃತರಪಟ್ಟವರ ಒಟ್ಟು ಸಂಖ್ಯೆ 12,387 ತಲುಪಿದೆ.
ಉಳಿದಂತೆ 992 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 9.38 ಲಕ್ಷ ಮೀರಿದೆ. ಸೋಂಕಿತರಲ್ಲಿ 123 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳು ತೀವ್ರ ಏರಿಕೆ ಕಂಡಿದ್ದು, 630 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆದರೆ ಯಾವುದೇ ಸಾವು ವರದಿಯಾಗಿಲ್ಲ. ಮೈಸೂರು 47, ದಕ್ಷಿಣ ಕನ್ನಡ 43, ತುಮಕೂರು 38, ಕಲಬುರಗಿ 35, ಬೀದರ್ 15, ಬೆಂಗಳೂರು ಗ್ರಾಮಾಂತರ ಮತ್ತು ಉಡುಪಿ ತಲಾ 13, ಹಾಸನ 11, ಧಾರವಾಡ 10 ಪ್ರಕರಣಗಳು ದೃಢಪಟ್ಟಿವೆ.