ನ್ಯೂಸ್

90 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ!; ಲಿಫ್ಟ್ ಕೊಡುವುದಾಗಿ ಹೇಳಿ ಕರೆದೊಯ್ದು ದುಷ್ಕೃತ್ಯ, ಬಳಿಕ ಮುಖ್ಯರಸ್ತೆಗೆ ಬಿಟ್ಟು ಪರಾರಿ

ಮಧ್ಯಪ್ರದೇಶ: ಬೈಕ್​ನಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣವೊಂದು ನಡೆದಿದೆ. ಮಧ್ಯಪ್ರದೇಶದಲ್ಲಿ ಇಂಥದ್ದೊಂದು ದುರ್ಘಟನೆ ನಡೆದಿದೆ.

ವೃದ್ಧೆ ಜಬಲ್​ಪುರದಿಂದ ಹೊರಟು ಗುರುವಾರ ರಾತ್ರಿ ಶಹದೊಲ್ ರೈಲ್ವೆ ಸ್ಟೇಷನ್​ಗೆ ಬಂದು ಇಳಿದಿದ್ದಳು. ಅಲ್ಲಿಂದ 15 ಕಿ.ಮೀ. ದೂರದ ಪ್ರದೇಶದಲ್ಲಿದ್ದ ಸಂಬಂಧಿಯನ್ನು ಭೇಟಿಯಾಗಲು ಈಕೆ ಬಂದಿದ್ದಳು. ತಡರಾತ್ರಿಯಲ್ಲಿ ರೈಲು ನಿಲ್ದಾಣದಲ್ಲಿದ್ದ ಈಕೆಯನ್ನು ಆಟೋಚಾಲಕ ಅಂತ್ರ ಎಂಬ ಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಬಿಟ್ಟಿದ್ದ. ಅಲ್ಲಿಂದ ಬೇರೆ ವಾಹನದಲ್ಲಿ ಸಂಬಂಧಿಯ ಮನೆಗೆ ಹೋಗಲು ತಿಳಿಸಿ ಹೋಗಿದ್ದ.

ಹೀಗೆ ರಸ್ತೆ ಬದಿಯಲ್ಲಿ ಬಸ್​ಗೆ ಕಾಯುತ್ತಿದ್ದ ಈಕೆಯನ್ನು ಕಂಡು ಅಪರಿಚಿತ ವ್ಯಕ್ತಿಯೊಬ್ಬ ತಾನು ಹಳ್ಳಿಗೆ ಬೈಕ್​ನಲ್ಲಿ ಬಿಡುವುದಾಗಿ ಹೇಳಿದ್ದ. ಮಾರ್ಗಮಧ್ಯೆ ಬೇರೆ ಕಡೆಗೆ ಕರೆದೊಯ್ದ ಈ ವ್ಯಕ್ತಿ ನಂತರ ನಿರ್ಜನ ಪ್ರದೇಶವೊಂದರಲ್ಲಿ ಅತ್ಯಾಚಾರ ನಡೆಸಿದ್ದ. ಬಳಿಕ ಬೈಕ್​ನಲ್ಲಿ ಮುಖ್ಯರಸ್ತೆಗೆ ಕರೆತಂದು ಬಿಟ್ಟು ಪರಾರಿಯಾಗಿದ್ದ.

ವೃದ್ಧೆ ಬಳಿಕ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.