ಕೊಪ್ಪಳ: ರಾಜ್ಯದ ಕೊಪ್ಪಳ(Koppala) ಜಿಲ್ಲೆಯಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಿರುವ 90 ವರ್ಷ ವಯಸ್ಸಿನ ವೃದ್ಧೆಗೆ ಬರೋಬ್ಬರಿ 1.03 ಲಕ್ಷ ರೂ. ಕರೆಂಟ್ ಬಿಲ್(Current Bill) ಬಂದಿರುವುದು ಕೇವಲ ಅಜ್ಜಿ ಮಾತ್ರವಲ್ಲದೇ, ಇಡೀ ರಾಜ್ಯದ ಜನತೆಯನ್ನು ಅಚ್ಚರಿಗೊಳಿಸಿದೆ!
ಇದನ್ನೂ ಓದಿ: ಯೂನಿವರ್ಸಿಟಿಗಳಲ್ಲಿ ಹೋಳಿ ಆಚರಣೆ ಬ್ಯಾನ್; ವ್ಯಾಪಕ ಟೀಕೆ ನಂತರ ಹಿಂಪಡೆದ ಪಾಕಿಸ್ತಾನ ಉನ್ನತ ಶಿಕ್ಷಣ ಇಲಾಖೆ
ತನ್ನ ಮಗನೊಂದಿಗೆ ಸಣ್ಣ ಮನೆಯಲ್ಲಿ ವಾಸವಿರುವ 90 ವರ್ಷದ ವೃದ್ಧೆಯೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, "ನಮ್ಮದು ಸಣ್ಣ ಮನೆ ಸ್ವಾಮಿ, ಮಗ ದಿನಗೂಲಿ ಕೆಲಸ ಮಾಡುತ್ತಿದ್ದಾನೆ. ಇಲ್ಲಿ ಎರಡು ಬಲ್ಬ್‌ಗಳು ಮಾತ್ರ ಉರಿಯುತ್ತವೆ. 1 ಲಕ್ಷ ರೂ. ಕರೆಂಟ್ ಬಿಲ್ ಅನ್ನು ಹೇಗೆ ಪಾವತಿಸಬೇಕೆಂದು ನನಗೆ ತಿಳಿದಿಲ್ಲ. ಇದರಿಂದ ಹೊರಬರಲು ನೀವೇ ನನಗೆ ಸಹಾಯ ಮಾಡಬೇಕು" ಎಂದು ಸ್ಥಳೀಯ ಸುದ್ದಿಗಾರರ ಬಳಿ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ವಾಸಿಸುವ ಗಿರಿಜಮ್ಮ ಅವರಿಗೆ ಎಂದಿನಂತೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(GESCOM) ನಿಂದ ಮೇ ತಿಂಗಳ ವಿದ್ಯುತ್ ಬಿಲ್ ಬಂದಿದೆ. ಆದ್ರೆ, ಈ ಬಾರಿ ಬಂದ ಬಿಲ್‌ನಲ್ಲಿ 1.03 ಲಕ್ಷ ರೂ. ಇರುವುದನ್ನು ಕಂಡು ವೃದ್ಧೆ ಆತಂಕಕ್ಕೆ ಒಳಗಾಗಿದ್ದಾರೆ. ಅಜ್ಜಿಯ ಮನೆಗೆ ಪ್ರತಿ ತಿಂಗಳ ವಿದ್ಯುತ್ ಬಿಲ್ ಕೇವಲ 70-80 ರೂ. ಮಾತ್ರ ಬರುತ್ತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೀದಿ ನಾಯಿ ಕಡಿತ ತಗ್ಗಿಸಲು ಬಿಬಿಎಂಪಿ ಮಾರ್ಗಸೂಚಿ
ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಸ್ಕಾಂ ಅಧಿಕಾರಿಗಳು, ನಾವು ಗಿರಿಜಮ್ಮ ಅವರ ಮನೆಗೆ ಆಗಮಿಸಿ ಬಿಲ್ ಅನ್ನು ಪರಿಶೀಲನೆ ನಡೆಸಿದ್ದೇವೆ. ತಾಂತ್ರಿಕ ದೋಷದಿಂದ ಬಿಲ್‌ನಲ್ಲಿ ಹೆಚ್ಚಿನ ಮೊತ್ತ ಬಂದಿದ್ದು, ಅವರು ಸಂಪೂರ್ಣ ಹಣವನ್ನು ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.