ಡಾ.ಎಂ.ಆರ್​.ರವಿ 
ನ್ಯೂಸ್

ಶೇ.90 ತಂತ್ರಾಂಶದಲ್ಲಿ ದಾಖಲು

ಕಿರುವಾರ ಎಸ್.ಸುದರ್ಶನ್

ಕೋಲಾರ: ಬಹು ವರ್ಷಗಳಿಂದ ರೈತರು ಅನುಭವಿಸುತ್ತಿದ್ದ ಪಿ ನಂಬರ್​ ಸಮಸ್ಯೆಗೆ ಮುಕ್ತಿ ಕಾಣಿದಲು, ಪೋಡಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಶೇ.90 ಪ್ರಕರಣಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿ ನಂಬರ್​ ತೆರವು ಮಾಡಬೇಕು ಎಂದು ರೈತರಿಂದ ಮನವಿಗಳು ಬಂದಿದ್ದವು, ಪೋಡಿ ದುರಸ್ತಿಗಾಗಿ 25,810 ಮಂಜೂರುದಾರರ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಭೂ ಮಂಜೂರಾತಿ ಆಗಿರುವ 6,108 ಸರ್ವೇ ನಂ.ಗಳಲ್ಲಿ 4,073 ಮಂಜೂರಿದಾರರ ವಿವರಗಳನ್ನು ಅನುಬಂಧ 1-5 ರಂತೆ ತಂತ್ರಾಂಶದಲ್ಲಿ ದಾಖಲಿಸಲಾಗಿರುತ್ತದೆ. 4,073 ಮಂಜೂರಿದಾರರ ಪೈಕಿ 463 ಖಾತೆದಾರರಿಗೆ ಪೋಡಿ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಸರ್ವೇ ನಂಬರ್​ಗಳಲ್ಲಿ ಪಹಣಿ ಇಂಡೀಕರಿಸಿ ಪಹಣಿ ವಿತರಿಸಲಾಗಿರುತ್ತದೆ ಎಂದರು.

ಬಾಕಿ ಇರುವ 3,610 ಮಂಜೂರಿದಾರರ ಬ್ಲಾಕ್​ಗಳನ್ನು ಶೀಘ್ರ ಜಮೀನಿನ ಸರ್ವೇ ಇಲಾಖೆಯಿಂದ ಅಳತೆ ಕಾರ್ಯ ನಡೆಸಲಾಗುವುದು. ಪೋಡಿ ದುರಸ್ತಿಯಂತೆ ಹೊಸ ಸರ್ವೇ ನಂಬರ್​ಗಳ ಪಹಣಿಗಳನ್ನು ಮುಂದಿನ ಎರಡು ತಿಂಗಳೊಳಗಾಗಿ ವಿತರಿಸಲಾಗುವುದು ಎಂದು ತಿಳಿಸಿದರು.

ಒಟ್ಟು 6,108 ಸರ್ವೇ ನಂಬರ್​ಗಳಲ್ಲಿ ಭೂ ಮಂಜೂರಾತಿಯಾಗಿರುವ 17,237 ಮಂಜೂರಿದಾರ ಸಂಬಂಧಿಸಿದಂತೆ ಮೂಲ ಮಂಜೂರಿ ಕಡತದಲ್ಲಿನ ದಾಖಲೆಗಳು ಶಿಥಿಲ, ಗೈರು ವಿಲೇಯಾಗಿರುವುದು ಕಂಡುಬಂದಿರುತ್ತದೆ. ಸದರಿ 17,237 ಪ್ರಕರಣಗಳು ಜಿಲ್ಲಾಮಟ್ಟದ ಗೈರು ವಿಲೇ ಪುನರ್​ ನಿಮಾರ್ಣ ಸಮಿತಿ ಹಂತಕ್ಕೆ ವರ್ಗಾವಣೆಯಾಗಿದ್ದು, ಇತ್ಯರ್ಥಪಡಿಸಲು ಈಗಾಗಲೇ ಪ್ರತಿ ತಿಂಗಳ 1 ನೇ ಮತ್ತು 3 ನೇ ಶನಿವಾರದಂದು ಸಮಿತಿಯ ಸಭೆಗಳನ್ನು ನೆಡೆಸಲಾಗುತ್ತಿದೆ ಎಂದು ಹೇಳಿದರು.