ನ್ಯಾಯಮೂರ್ತಿಗಳೊಂದಿಗೆ ಸಿಜೆಐ ಎನ್​.ವಿ.ರಮಣ 
ನ್ಯೂಸ್

9 ನ್ಯಾಯಮೂರ್ತಿಗಳ ಪ್ರಮಾಣವಚನ; ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸಹಿತ ಮೂವರು ಮಹಿಳೆಯರು ಸುಪ್ರೀಂಗೆ

ನವದೆಹಲಿ: ದೇಶದ ಸವೋನ್ನತ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಬಾರಿಗೆ ಒಂಬತ್ತು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮೂವರು ಮಹಿಳಾ ಜಸ್ಟೀಸ್​ಗಳನ್ನೂ ಒಳಗೊಂಡಂತೆ ಒಂಬತ್ತು ಮಂದಿಗೆ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಕಳೆದ ವಾರ ಇವರು ನೇಮಕಗೊಂಡಿದ್ದು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸುಪ್ರೀಂಕೋರ್ಟ್ ಮೂರನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆದ ಸಮಾರಂಭದಲ್ಲಿ ಸಿಜೆಐ ಎನ್.ವಿ. ರಮಣ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು. ಸೇವಾ ಹಿರಿತನದ ಅನುಕ್ರಮದಲ್ಲಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದರು.

ನಾಗರತ್ನಗೆ ಸಿಜೆಐ ಆಗುವ ಅವಕಾಶ: ದೇಶದ ಸವೋನ್ನತ ನ್ಯಾಯಾಲಯಕ್ಕೆ ನ್ಯಾಯ ಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದವರ ಪೈಕಿ ಮೂವರಿಗೆ ಸೇವಾ ಹಿರಿತನದ ಆಧಾರದಲ್ಲಿ ಸಿಜೆಐ ಆಗುವ ಅವಕಾಶವಿದೆ. ಆ ಪೈಕಿ ಕರ್ನಾಟಕದ ಜಸ್ಟಿಸ್ ಬಿ.ವಿ. ನಾಗರತ್ನ ಅವರೂ ಒಬ್ಬರು. 2027 ಸೆಪ್ಟೆಂಬರ್ 24ರಂದು ದೇಶದ ಪ್ರಪ್ರಥಮ ಮಹಿಳಾ ಸಿಜೆಐ ಆಗುವ ಅವಕಾಶ ಅವರಿಗೆ ಇದೆ. ಅದೇ ವರ್ಷ ಅಕ್ಟೋಬರ್ 29ರಂದು ಅಧಿಕಾರಾವಧಿ ಮುಗಿದು ನಿವೃತ್ತರಾಗಲಿದ್ದಾರೆ. ಇವರ ತಂದೆ ಇ.ಎಸ್. ವೆಂಕಟರಾಮಯ್ಯ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಶಿಷ್ಟಾಚಾರ ಪಾಲನೆ: ಕರೊನಾ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಇತರ ಶಿಷ್ಟಾಚಾರಗಳನ್ನು ಪಾಲಿಸುವ ಉದ್ದೇಶದಿಂದ ಕೋರ್ಟ್ ಸಂಕೀರ್ಣದ ಆಡಿಟೋರಿಯಂನಲ್ಲಿ ಸಮಾರಂಭ ನಡೆಯಿತು. ಸಾಮಾನ್ಯವಾಗಿ ಸಿಜೆಐ ಕೋರ್ಟ್ ರೂಂನಲ್ಲಿ ಅಧಿಕಾರ ವಹಿಸಿಕೊಳ್ಳಲಾಗುತ್ತದೆ.

2 ವರ್ಷಗಳ ನಂತರ ನೇಮಕ: ಸಿಜೆಐ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎ.ಎಂ. ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಕೊಲಿ ಜಿಯಂ ಆ.17ರಂದು ನಡೆಸಿದ ಸಭೆಯಲ್ಲಿ ಈ 9 ಮಂದಿಯ ಹೆಸರುಗಳನ್ನು ಪದೋನ್ನತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ.26ರಂದು ರಾಷ್ಟ್ರಪತಿಗಳು ಕೊಲಿಜಿಯಂ ಶಿಫಾರಸಿಗೆ ಅಂಕಿತ ಹಾಕಿದ್ದ ಹಿನ್ನೆಲೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯ ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. 2019ರ ಸೆಪ್ಟಂಬರ್​ನಲ್ಲಿ ಕೊನೆಯಬಾರಿಗೆ ಸುಪ್ರೀಂಕೋರ್ಟ್​ಗೆ ನ್ಯಾಯಮೂರ್ತಿಗಳ ನೇಮಕವಾಗಿತ್ತು. ಇದೀಗ ಬಹುತೇಕ 2 ವರ್ಷಗಳ ನಂತರ 9 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ. ನೂತನ ನ್ಯಾಯಮೂರ್ತಿಗಳ ಸೇರ್ಪಡೆಯಿಂದ ಸುಪ್ರೀಂಕೋರ್ಟ್​ಗೆ ಮಂಜೂರಾಗಿರುವ 34 ನ್ಯಾಯಮೂರ್ತಿ ಹುದ್ದೆಗಳಲ್ಲಿ 33 ಹುದ್ದೆಗಳು ಭರ್ತಿಯಾದಂತಾಗಿದ್ದು, ಒಂದು ಹುದ್ದೆ ಖಾಲಿ ಉಳಿದಿದೆ.