ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ನದಿಗಳ ಪುನಶ್ಚೇತನ ಕಾರ್ಯಯೋಜನೆಯನ್ನು ಪ್ರಸಕ್ತ 9 ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅಂತರ್ಜಲ ಮರುಪೂರಣ ಕಾರ್ಯ ಕೈಗೊಳ್ಳಲು ನದಿಗಳ ವ್ಯಾಪ್ತಿಯ ಕೆರೆಗಳ ಪುನಶ್ಚೇತನ, ಪುಷ್ಕರಣಿಗಳ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ. ಶಿವಮೊಗ್ಗ, ಕೋಲಾರ, ತುಮಕೂರು, ಬಳ್ಳಾರಿ, ಯಾದಗಿರಿ, ಬೆಳಗಾವಿಯ ಎಲ್ಲ ತಾಲೂಕು ಹಾಗೂ ಕೊಡಗು, ಉಡುಪಿ, ಕಾರವಾರ ಜಿಲ್ಲೆಯ ತಲಾ ಎರಡು ತಾಲೂಕನ್ನು ಆಯ್ಕೆ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಂಬಂಧ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಆರ್ಟ್ ಆಫ್ ಲಿವಿಂಗ್‌ನ ತಾಂತ್ರಿಕ ಸಹಕಾರದೊಂದಿಗೆ 9 ಜಿಲ್ಲೆಗಳ ಜಲಮೂಲಗಳ ಪುನಶ್ಚೇತನ ಮಾಡುವ ಗುರಿ ಹೊಂದಲಾಗಿದೆ ಎಂದರು.
ಜಲಾನಯನವಾರು ಪ್ರಸ್ತುತ ಸ್ಥಿತಿಯ ಅಧ್ಯಯನವನ್ನು ಉಪಗ್ರಹ ಮಾಹಿತಿ ಪಡೆಯುವುದು, ಮುಖ್ಯ ನದಿಗೆ ಸಮಾಗಮಿಸುವ ಸಕಾಲ ಸ್ವಾಭಾವಿಕ ಹಳ್ಳಿಗಳ ನಕ್ಷೆ ತಯಾರಿಸುವುದು ಸೇರಿ ರೂಪುರೇಷಗಳನ್ನು ಸಿದ್ಧಪಡಿಸಲಾಗಿದೆ. ಮರ ಬೆಳೆಸುವುದು, ಕಲ್ಲಿ ಗುಂಡುಗಳ ತಡೆ, ಇಂಗು ಬಾವಿ ಮತ್ತು ಕೊಳವೆ ಬಾವಿಗಳು, ನೀರಿನ ಕೊಳಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳ ಶಾಸಕರು, ಎಂಎಲ್‌ಸಿಗಳು, ಲೋಕಸಭಾ ಸದಸ್ಯರು, ಜಿಪಂ ಅಧ್ಯಕ್ಷರು, ಸಿಇಓ, ತಾಪಂ, ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳ ಸಭೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
-------------
ತಲಾ 5 ಜನರ ಗುಂಪು
ಕರೊನಾ ಆತಂಕದ ನಡುವೆಯೂ ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಐದು ಜನರ ಗುಂಪು ಮಾಡಿ, ನಿರ್ದಿಷ್ಟ ಕೆಲಸವನ್ನು ಮಾತ್ರ ವಹಿಸಲು ಸೂಚಿಸಲಾಗಿದೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಇದನ್ನು ಇಡೀ ರಾಜ್ಯದಲ್ಲೇ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
-----
ನೀರು-ನೈರ್ಮಲ್ಯಕ್ಕೆ ಭರಪೂರ ಕೊಡುಗೆ
ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಭರಪೂರ ಕೊಡುಗೆ ನೀಡಿದೆ. ಗ್ರಾಪಂಗಳಿಗೆ 2,700 ಕೋಟಿ ರೂ., ತಾಪಂಗಳಿಗೆ 265 ಕೋಟಿ ರೂ. ಹಾಗೂ ಜಿಪಂಗಳಿಗೆ 165 ಕೋಟಿ ರೂ. ಬಿಡುಗಡೆ ಮಾಡಿದೆ. ಅಲ್ಲದೆ, ನರೇಗಾ ಯೋಜನೆಗೆ 1860 ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ ಕಾರ್ಮಿಕರು ಹಾಗೂ ಪರಿಕರ ಖರೀದಿ ಬಾಕಿ ಹಣ ವಿತರಣೆ ಮಾಡಿ ಸಾವಿರ ಕೋಟಿ ರೂ. ಉಳಿದಿದ್ದು, ಕೆಲಸ ಮಾಡಿದ 15 ದಿನದಲ್ಲೇ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮಾ ಮಾಡುವಂತೆ ಮಾಡಲಾಗುವುದು. ಈಗಾಗಲೇ 249ರಿಂದ 275 ರೂ.ಗೆ ಕೂಲಿ ಏರಿಕೆ ಮಾಡಿದ್ದು, ಗ್ರಾಪಂಗಳಲ್ಲಿ ಜಾಬ್‌ಕಾರ್ಡ್ ಪಡೆಯದವರಿಗೆ ಮಾಡಿಕೊಡಲು ಸೂಚನೆ ನೀಡಲಾಗಿದೆ ಎಂದರು.