ನ್ಯೂಸ್

9 ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಿಎಂ

ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ನೀಡಿದ ಗ್ರಾಮವಾಗಿದ್ದು, ಹಂತ ಹಂತವಾಗಿ ಹಿನಕಲ್ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೊರ ವಲಯದಲ್ಲಿರುವ ಹಿನಕಲ್ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆ ಆರಂಭಿಸಲಾಗಿರುವ 9 ಇಂದಿರಾ ಕ್ಯಾಂಟಿನ್‌ಗಳನ್ನು ಉದ್ಘಾಟಿಸಿ ಮಾತನಾಡಿದರು.

ನನಗೆ ಹಿನಕಲ್ ಗ್ರಾಮ ರಾಜಕೀಯವಾಗಿ ಶಕ್ತಿ ತುಂಬಿದ ಊರು. ಈ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಿದ್ಧನಿದ್ದೇನೆ. ಶಾಸಕ ಜಿ.ಟಿ. ದೇವೇಗೌಡ ಅವರು ಗ್ರಾಮಕ್ಕೆ ಕಾವೇರಿ ನೀರು ಪೂರೈಕೆ, ಸ್ಮಶಾನ ಅಭಿವೃದ್ಧಿ, ಹೆಚ್ಚುವರಿ ನಿವೇಶನ, ಮಾರಮ್ಮ ದೇಗುಲ ಅಭಿವೃದ್ಧಿ, ವಾಲ್ಮೀಕಿ ಭವನ ಪೂರ್ಣಗೊಳಿಸಲು ಅನುದಾನ ಕೇಳಿರುವ ಜತೆಗೆ ಪಟ್ಟಣ ಪಂಚಾಯಿತಿ, ಪುರಸಭೆಯಲ್ಲಿನ ಇಂಜಿನಿಯರ್‌ಗಳ ನೇಮಕಾತಿ, ಪಿಯುಸಿ ಕಾಲೇಜು ಕೇಳಿದ್ದಾರೆ. ಎಲ್ಲವನ್ನೂ ಹಂತ ಹಂತವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಡವರು, ಕೂಲಿ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗಳಿಗೆ ಬರುವ ಜನರ ಹಸಿವನ್ನು ಕಡಿಮೆ ದರದಲ್ಲಿ ನೀಗಿಸುವ ಉದ್ದೇಶದಿಂದ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿದೆ. ಕಡಿಮೆ ದರದಲ್ಲಿ ಆಹಾರ ಪದಾರ್ಥ ಕೊಡಬೇಕು ಎಂಬ ಉದ್ದೇದಿಂದ ಇದನ್ನು ಪ್ರಾರಂಭಿಸಿದೆವು. ಬಹಳ ಜನ ಹಸಿದು ಕೆಲಸ ಮಾಡುತ್ತಿರುವುದು ಹಾಗೂ ಹೋಟೆಲ್‌ನಲ್ಲಿ ಆಹಾರ ಪದಾರ್ಥ ದರ ಹೆಚ್ಚಿರುವುದನ್ನು ಗಮನಿಸಿ 2017ರಲ್ಲಿ ರಾಹುಲ್ ಗಾಂಧಿ ಅವರನ್ನು ಬೆಂಗಳೂರಿಗೆ ಕರೆಸಿ ಇಂದಿರಾ ಕ್ಯಾಂಟೀನ್ ಆರಂಭಿಸಿದೆವು ಎಂದರು.

2017ರಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆ ಮತ್ತು ತಾಲೂಕು ಕ್ಯಾಂಟಿನ್ ತೆರೆದವು. ಆದರೆ, ನಂತರ ಬಂದ ಸರ್ಕಾರದ ಅವಧಿಯಲ್ಲಿ ಕ್ಯಾಂಟೀನ್‌ಗಳು ಸೊರಗಿದವು. 2023ರಲ್ಲಿ ಮತ್ತೆ ನಾನು ಸಿಎಂ ಆದಮೇಲೆ ಇಂದಿರಾ ಕ್ಯಾಂಟಿನ್‌ಗಳನ್ನು ಪುನಾರಂಭಿಸುವ ಜತೆಗೆ ಹೊಸದಾಗಿ ಇನ್ನೂ 184 ಕ್ಯಾಂಟೀನ್‌ಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.

ಹಿನಕಲ್‌ನಲ್ಲಿ, ಕಡಕೊಳ, ರಮ್ಮನಹಳ್ಳಿ, ಬೋಗಾದಿ, ಬನ್ನೂರು, ಪಿರಿಯಾಪಟ್ಟಣ, ಹೂಟಗಳ್ಳಿ ವ್ಯಾಪ್ತಿಯಲ್ಲಿ ಒಟ್ಟು 9 ಕ್ಯಾಂಟೀನ್ ಉದ್ಘಾಟನೆ ಮಾಡಿದ್ದೇನೆ. ಬೆಳಗಿನ ತಿಂಡಿ 5 ರೂ. ಮಧ್ಯಾಹ್ನದ ಊಟ 10 ರೂ. ಹಾಗೂ ರಾತ್ರಿ ಊಟಕ್ಕೆ 10 ರೂ. ಇರಲಿದ್ದು, ದಿನದ ಮೂರು ಸಮಯದಲ್ಲೂ ಕಡಿಮೆ ಬೆಲೆಗೆ ಆಹಾರ ಪದಾರ್ಥ ದೊರಕಲಿದ್ದು, ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಈ ಯೋಜನೆ ಉಪಯೋಗಿಸಿಕೊಳ್ಳಬೇಕು. ಯಾರೂ ಹಸಿವಿನಿಂದ ಮಲಗಬಾರದು ಎಂದರು.