ಕಳಸ: ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿಯ ಕಂಚಿನ ಪುತ್ಥಳಿಯನ್ನು ಮೇ8ರ ಬೆಳಗ್ಗೆ 11ಕ್ಕೆ ರಾಜ್ಯಪಾಲ ಥಾವರಚಂದ ಗೆಹಲೋತ್ ಅನಾವರಣಗೊಳಿಸಲಿದ್ದಾರೆ ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಲಲಿತಕಲಾ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಶ್ರೀ ಅನ್ನಪೂರ್ಣಾ ಪಾದಸೇವಾ ಧುರಂಧರ ಪುಸ್ತಕ ಬಿಡುಗಡೆ, ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಗೃಹಲಕ್ಷ್ಮಿಯೋಜನೆಯಲ್ಲಿ ಹೆಂಚುಗಳ ವಿತರಣೆ, ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪತ್ರ ವಿತರಣೆ, ಕೃಷಿ ಸಮೃದ್ಧಿ ಯೋಜನೆಯಲ್ಲಿ ಕೃಷಿ ಉಪಕರಣಗಳ ವಿತರಣೆ, ಮಹಿಳಾಭಿವೃದ್ಧಿ ಯೋಜನೆಯಲ್ಲಿ ಹೊಲಿಗೆ ಯಂತ್ರಗಳ ವಿತರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್, ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ನಯನಾ ಮೋಟಮ್ಮ, ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.