ನ್ಯೂಸ್

8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ... ಮುಂದಾದದ್ದು ದೊಡ್ಡ ದುರಂತ

rameshapm

ಲಖನೌ : ಎಂಟನೇ ತರಗತಿಯ ವಿದ್ಯಾಭ್ಯಾಸವನ್ನೂ ಮುಗಿಸದ ವ್ಯಕ್ತಿಯೊಬ್ಬ ಸಿಸೇರಿಯನ್ ಆಪರೇಷನ್​ನಿಂದ ಹೆರಿಗೆ ಮಾಡಿಸಿದ ಪ್ರಸಂಗವೊಂದರಲ್ಲಿ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಕಲಿ ವೈದ್ಯರು ಮತ್ತು ದಾದಿಯರೊಂದಿಗೆ ನಡೆಸಲಾಗುತ್ತಿದ್ದ ಖಾಸಗಿ ಕ್ಲಿನಿಕ್​​ನಲ್ಲಿ ಈ ಘಟನೆ ನಡೆದಿದೆ.

ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿಯಾಗಿದ್ದ ಪೂನಮ್ ಮತ್ತು ಆಕೆಯ ಮಗು ಈ ದುರಂತ ಸಾವಿಗೀಡಾಗಿರುವ ನತದೃಷ್ಟರು. ನೋಂದಣಿಯಾಗದ ಮಾ ಶಾರದಾ ಆಸ್ಪತ್ರೆಯಲ್ಲಿ ಶೇವಿಂಗ್ ಬ್ಲೇಡ್ ಬಳಸಿ ಸಿ-ಸೆಕ್ಷನ್ ಮಾಡಿದ ರಾಜೇಂದ್ರ ಶುಕ್ಲ(30) ಎಂಬುವನನ್ನೂ, ಆಸ್ಪತ್ರೆ ಮಾಲೀಕ ರಾಜೇಶ್ ಸಹನಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಪೂನಮ್​ ಅವರ ಪತಿ ರಾಜಾರಾಮ್ ವೈದ್ಯಕೀಯ ನಿರ್ಲಕ್ಷ್ಯದಿಂದ ನನ್ನ ಹೆಂಡತಿ-ಮಗು ಸತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಹೆರಿಗೆನೋವು ಕಾಣಿಸಿಕೊಂಡಿದ್ದ ಪೂನಮ್​ರನ್ನು ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಅಲ್ಲಿನ ನರ್ಸ್​ ಒಬ್ಬಳು ಈ ಆಸ್ಪತ್ರೆಗೆ ಕಳುಹಿಸಿದ್ದಳು. ಅಲ್ಲಿ 'ಶಸ್ತ್ರಚಿಕಿತ್ಸೆ' ಮಾಡಿ ಮಗುವನ್ನು ಹೊರತೆಗೆದಾಗ ಆಕೆ ವಿಪರೀತ ರಕ್ತ ಕಳೆದುಕೊಂಡರೆ, ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವಪ್ಪಿದೆ.

ಏನೂ ಸೌಕರ್ಯಗಳಿಲ್ಲದ ಆಸ್ಪತ್ರೆಯಲ್ಲಿನ ಆಪರೇಷನ್ ಟೇಬಲ್​ನಲ್ಲಿ ರಕ್ತಹರಿಯುತ್ತಾ ಬಿದ್ದಿದ್ದ ಪೂನಮ್​​ರನ್ನು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆರೋಪಿ ಶುಕ್ಲ ಹೇಳಿದ. ಕೂಡಲೇ ಲಖನೌನ ಟ್ರಾಮಾ ಕೇರ್ ಸೆಂಟರ್​ಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವಪ್ಪಿದ್ದಾಳೆ ಎಂದು ಹೆಂಡತಿ-ಮಗು ಎರಡನ್ನೂ ಕಳೆದುಕೊಂಡ ರಾಜಾರಾಂ ದೂರಿನಲ್ಲಿ ತಿಳಿಸಿದ್ದಾರೆ.

ಸುಲ್ತಾನಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನೋಂದಣಿಯಿಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿರುವ ಈ ತೆರನ ಕ್ಲಿನಿಕ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಖ್ಯ ವೈದ್ಯಾಧಿಕಾರಿಗೆ ಪತ್ರ ಬರೆದಿರುವುದಾಗಿ ಸುಲ್ತಾನಪುರ ಎಸ್ಪಿ ಅರವಿಂದ ಚತುರ್ವೇದಿ ಹೇಳಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ