ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಜು.21ರ ಸಂಜೆ 4ಕ್ಕೆ ಇರುವಕ್ಕಿ ಕ್ಯಾಂಪಸ್‌ನಲ್ಲಿ ನೆರವೇರಲಿದೆ. ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸುವರು.
ಸಹ ಕುಲಾಧಿಪತಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸುವರು. ರಾಜ್ಯಸಭಾ ಸದಸ್ಯ, ಪದ್ಮವಿಭೂಷಣ ಪುರಸ್ಕೃತ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಡಾ. ಆರ್.ಸಿ.ಜಗದೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿವಿಧ ವಿಷಯಗಳಲ್ಲಿ ವ್ಯಾಸಂಗ ಮಾಡಿದ 409 ಸ್ನಾತಕ ಪದವೀಧರರು ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲಿದ್ದಾರೆ. ಕೃಷಿ, ತೋಟಗಾರಿಕೆ ಅರಣ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ 101 ವಿದ್ಯಾರ್ಥಿಗಳಿಗೆ ಪದವಿ ಹಾಗೂ 23 ಮಂದಿಗೆ ಪಿಎಚ್.ಡಿ, ರ‌್ಯಾಂಕ್ ಗಳಿಸಿದ 29 ವಿದ್ಯಾರ್ಥಿಗಳಿಗೆ ಒಟ್ಟು 37 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ವಿವಿ ಆರಂಭವಾಗಿ 10 ವರ್ಷವಾಗಿದೆ. ಈ ಅವಧಿಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದೇವೆ. ಕಳೆದ ಒಂದು ವರ್ಷದಲ್ಲಿ ಐವರು ವಿಸ್ತರಣಾ ಸಿಬ್ಬಂದಿಗೆ ತರಬೇತಿ, 21 ಪ್ರಾಯೋಜಿತ ತರಬೇತಿ, 19 ವೃತ್ತಿ ತರಬೇತಿ ಹಾಗೂ 18 ಕೌಶಲಾಧಾರಿತ ತರಬೇತಿ ಕಾರ್ಯಕ್ರಮಗಳು ಸೇರಿ ಒಟ್ಟು 2,270 ಫಲಾನುಭವಿಗಳಿಗೆ ತರಬೇತಿ ನೀಡಲಾಗಿದೆ. 5 ಸಾವಿರ ಮಣ್ಣು ಮಾದರಿ ಹಾಗೂ 1,700 ನೀರಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ ಎಂದು ಹೇಳಿದರು.
2022-23ನೇ ಸಾಲಿನಲ್ಲಿ ಬೋಧಕ ಮತ್ತು ಬೋಧಕೇತರ ವಿಭಾಗದ ಹಲವು ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ. 101 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಂಡು ಶಿಕ್ಷಣ ಸಂಶೋಧನೆ, ವಿಸ್ತರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ನಾಲ್ವರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಾರಿಯೂ ಗೌರವ ಡಾಕ್ಟರೇಟ್ ಇಲ್ಲ!: ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯಿಂದ ಮೊದಲ ಬಾರಿಗೆ 6ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಸತತ ಎರಡನೇ ಘಟಿಕೋತ್ಸವದಲ್ಲೂ ಯಾರಿಗೂ ಗೌರವ ಡಾಕ್ಟರೇಟ್ ನೀಡಲಾಗುತ್ತಿಲ್ಲ ಎಂದು ಕುಲಪತಿ ಡಾ. ಆರ್.ಸಿ.ಜಗದೀಶ ತಿಳಿಸಿದರು.
ವಿವಿಗೆ ಹರಿದು ಬಂದ ಆದಾಯ: ವಿವಿಯಿಂದ ಪ್ರಸಕ್ತ ಸಾಲಿನಲ್ಲಿ 5,431 ಕ್ವಿಂಟಾಲ್ ಏಕದಳ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳ ಬೀಜೋತ್ಪಾದನೆ ಹಾಗೂ 4.25 ಲಕ್ಷ ಗುಣಮಟ್ಟದ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಉತ್ಪಾದಿಸಲಾಗಿದೆ. 240 ಕ್ವಿಂಟಾಲ್ ಕೆಜಿ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳನ್ನು ಉತ್ಪಾದಿಸಿ 24 ಲಕ್ಷ ರೂ. ಆದಾಯ ಗಳಿಸಲಾಗಿದೆ. 1,300 ಕೆ.ಜಿ ಜೇನು ತುಪ್ಪ ಉತ್ಪಾದಿಸಿ 4 ಲಕ್ಷ ರೂ. ಆದಾಯ ಪಡೆಯಲಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಸಂಸ್ಥೆಗಳ 66 ಹೊಸ ಉತ್ಪನ್ನಗಳನ್ನು ಪರೀಕ್ಷೆ ಮಾಡಿ 1.22 ಕೋಟಿ ರೂ. ಶುಲ್ಕ ಸಂಗ್ರಹಿಸಲಾಗಿದೆ ಎಂದು ಡಾ. ಆರ್.ಸಿ.ಜಗದೀಶ್ ಮಾಹಿತಿ ನೀಡಿದರು.
ಹೊಸ ಭತ್ತದ ತಳಿ: ವಿವಿಯಿಂದ ಈ ವರ್ಷ ಭತ್ತದ ಮೂರು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ವಲಯ 7ಕ್ಕೆ ಸೂಕ್ತವಾದ ಅಧಿಕ ಇಳುವರಿ ಕೊಡುವ ಸಹ್ಯಾದ್ರಿ, ಸಿರಿ, ಗುಡ್ಡಗಾಡು ಹಾಗೂ ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಜಲಮುಕ್ತಿ ಹಾಗೂ ಕರಾವಳಿ ಭಾಗದ ಮಜಲು ಹಾಗೂ ಬೆಟ್ಟು ಗದ್ದೆಗಳಲ್ಲಿ ಮುಂಗಾರಿನಲ್ಲಿ ಬೆಳೆಯಬಹುದಾದ ಸಹ್ಯಾದ್ರಿ ಸಪ್ತಮಿ ತಳಿಗಳನ್ನು ಆಯಾ ಭಾಗದ ರೈತರಿಗೆ ಒದಗಿಸಲಾಗಿದೆ ಎಂದು ಡಾ. ಆರ್.ಸಿ.ಜಗದೀಶ ತಿಳಿಸಿದರು.