ಸನಾ: ಯುದ್ಧ ಪೀಡಿತ ಯಮೆನ್ನಲ್ಲಿ ರಂಜಾನ್ ಪ್ರಯುಕ್ತ ನಡೆಯುತ್ತಿದ್ದ ಚಾರಿಟಿ ಕಾರ್ಯಕ್ರಮದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಸುಲುಕಿ 85 ಮಂದಿ ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಂಜಾನ್ನಲ್ಲೇ ದುರಂತ
ಈ ಘಟನೆ ಗುರುವಾರ ಮುಂಜಾನೆ ನಡೆದಿದೆ. ದಶಕಗಳಲ್ಲೇ ಇದು ಅತ್ಯಂತ ಮಾರಣಾಂತಿಕ ಕಾಲ್ತುಳಿತ ಎಂದು ಹುಥಿ ಅಧಿಕಾರಿಗಳು ತಿಳಿಸಿದ್ದಾರೆ. ಅರೇಬಿಯನ್ ಪೆನಿನ್ಸುಲಾದ ಬಡ ದೇಶದಲ್ಲಿ ಮುಸ್ಲಿಂ ಪವಿತ್ರ ತಿಂಗಳು ರಂಜಾನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಯಮೆನ್ ರಾಜಧಾನಿ ಸನಾದ ಬಾಬಾ ಎಲ್ ಯೆಮೆನ್ ಜಿಲ್ಲೆಯಲ್ಲಿ ಕಾಲ್ತುಳಿತ ಸಂಭವಿಸಿರುವುದಾಗಿ ಹುಥಿ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನುಗ್ಗಲು ಉಂಟಾಗಿ ಕಾಲ್ತುಳಿತ
ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ರಂಜಾನ್ ಪ್ರಯುಕ್ತ ಶಾಲೆಯ ಆವರಣ ಒಂದರ ಒಳಗೆ ನೆರವು ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಡತನ ಪೀಡಿತ ದೇಶದ ನೂರಾರು ಜನರು ನೆರವನ್ನು ಸ್ವೀಕರಿಸಲು ಒಂದೆಡೆ ಜಮಾಯಿಸಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಈವೆಂಟ್ ಆಯೋಜಕರ ಬಂಧನ
ಹುಥಿ ಬಂಡುಕೋರರ ಅಲ್ ಮಸಿರಾ ಟಿವಿ ಚಾನೆಲ್‌ನಿಂದ ಪ್ರಸಾರವಾದ ವೀಡಿಯೊವು ಮೃತದೇಹಗಳನ್ನು ಒಟ್ಟಿಗೆ ಪ್ಯಾಕ್ ಮಾಡುತ್ತಿರುವುದನ್ನು ತೋರಿಸಿದೆ. ಮೃತದೇಹಗಳನ್ನು ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಇದಲ್ಲದೆ, ನೆರವು ವಿತರಣೆಗೆ ಕಾರಣರಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹುಥಿ ಆಂತರಿಕ ಸಚಿವಾಲಯವು ಮಾಧ್ಯಮಗಳಿಗೆ ತಿಳಿಸಿದೆ. (ಏಜೆನ್ಸೀಸ್)