ಶಿವಮೊಗ್ಗ: ನಗರದಾದ್ಯಂತ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕಳಪೆ ಮಟ್ಟದ ಯುಜಿ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಒಂದೇ ವರ್ಷದಲ್ಲಿ 844 ಕಡೆಗಳಲ್ಲಿ ಯುಜಿ ಕೇಬಲ್ ಸಮಸ್ಯೆ ಉದ್ಭವಿಸಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎ.ಸತೀಶ್‌ಕುಮಾರ್ ಶೆಟ್ಟಿ ದೂರಿದರು.
ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ತಂದಿದ್ದೇವೆ. ಪಟ್ಟಿ ಮಾಡಿಕೊಡಲು ಹೇಳಿದ್ದು, ಶೀಘ್ರವೇ ಎಲ್ಲ ಲೋಷದೋಪಗಳ ಕುರಿತು ಸಮಗ್ರ ಮಾಹಿತಿಯನ್ನು ಸಚಿವರಿಗೆ ಒದಗಿಸುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ, ಶೀಘ್ರವೇ ಪ್ರಧಾನಮಂತ್ರಿ ಪೋರ್ಟಲ್‌ಗೂ ಕಳಪೆ ಕಾಮಗಾರಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತೇವೆ ಎಂದು ಹೇಳಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್ ಮಾತನಾಡಿ, ಯುಜಿ ಕೇಬಲ್‌ಗಳು ಕಳಪೆಯಾಗಿವೆ. ನಗರದ ಹಲವು ಬಡಾವಣೆಗಳ ಫೀಡರ್ ಬಾಕ್ಸ್‌ಗಳಿಗೆ ಬೆಂಕಿ ತಗುಲಿ ಅನಾಹುತಗಳು ಸಂಭವಿಸುತ್ತಿವೆ. ವಿದ್ಯುತ್ ಕಾಮಗಾರಿಗಳನ್ನು ನಿಯಮ ಪಾಲಿಸದೇ ನಡೆಸಲಾಗಿದೆ. ಈ ಹಿಂದೆ ಶಾಸಕರ ಸಮ್ಮುಖದಲ್ಲೇ ಹಲವು ಬಾರಿ ಚರ್ಚೆ ನಡೆಸಲಾಗಿದ್ದು, ಸರಿಪಡಿಸುವಂತೆ ಸೂಚನೆ ಮತ್ತು ಮಾರ್ಗದರ್ಶನ ನೀಡಿದ್ದರೂ ಯಾವುದೂ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕನಸಿನ ಯೋಜನೆ ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲಿ ಯಾವುದೇ ಗುಣಮಟ್ಟ ಕಾಪಾಡದೇ ಐದು ವರ್ಷಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಲಾಗಿದೆ. ಜತೆಗೆ ಭ್ರಷ್ಟಾಚಾರದ ಕೂಪವಾಗಿರುವ ಈ ಯೋಜನೆ ಶಿವಮೊಗ್ಗದಲ್ಲಿ ವೈಫಲ್ಯವಾಗಿದೆ. ಐದು ವರ್ಷ ನಿರ್ವಹಣೆ ಮಾಡಬೇಕಿದ್ದ ಗುತ್ತಿಗೆದಾರರು ಈಗಾಗಲೇ ಪಾಲಿಕೆಗೆ ಹಸ್ತಾಂತರ ಮಾಡಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದರು.