ಜಿನೀವಾ: ಕ್ಯಾನ್ಸರ್ ಮಾರಕ ಕಾಯಿಲೆ. ಸೂಕ್ತ ಚಿಕಿತ್ಸೆಯಿಂದ ಸಾವಿನಿಂದ ಪಾರಾಗಬಹುದಾದರೂ ಅದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ಹಾಗಾಗಿ ಕ್ಯಾನ್ಸರ್ ಎಂದರೇ ಭಯ ಪಡುವ ಪರಿಸ್ಥಿತಿ ಬಂದಿದೆ.
ಹೀಗಿರುವಾಗ ಕ್ಯಾನ್ಸರ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೊಂದು ಆಘಾತಕಾರಿ ವರದಿಯನ್ನು ನೀಡಿದೆ.
ವಿಶ್ವದಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದುವ ರಾಷ್ಟ್ರಗಳಲ್ಲಿ 2024ರ ವೇಳೆಗೆ ಕ್ಯಾನ್ಸರ್ ಪ್ರಮಾಣ ಶೇ.81ರಷ್ಟು ಹೆಚ್ಚಾಗಬಹುದು ಎಂದು ಯುನೈಟೆಡ್ ನೇಶನ್ಸ್ನ ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.
ಕಡಿಮೆ, ಮಧ್ಯಮ ಆದಾಯ ಹೊಂದುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ನಿಯಂತ್ರಣ ಕ್ರಮ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಮೇಲೆ ಹೂಡಿಕೆ ಮಾಡಲು ಸಾಧ್ಯವಾಗದೆ ಇರುವುದೇ ಇದಕ್ಕೆ ಕಾರಣ ಎಂದೂ ಡಬ್ಲ್ಯೂಎಚ್ಒ ಹೇಳಿದೆ.
ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು, ಇನ್ನೂ ಅಭಿವೃದ್ಧಿ ಹೊಂದದ ದೇಶಗಳು ತಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ, ಚಿಕಿತ್ಸೆಗೆ ಬಳಸಿಕೊಳ್ಳುತ್ತಿವೆ. ಅವು ಸಾಂಕ್ರಾಮಿಕ ರೋಗದ ಬಗ್ಗೆಯೇ ಹೆಚ್ಚೆಚ್ಚು ಗಮನಹರಿಸುತ್ತಿವೆ. ಹಾಗೇ ಮಕ್ಕಳು, ತಾಯಂದಿರ ಆರೋಗ್ಯ ರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿವೆ. ಆದರೆ ಕ್ಯಾನ್ಸರ್ನಂತಹ ಅಧಿಕ ವೆಚ್ಚದ ಚಿಕಿತ್ಸೆ ಅಗತ್ಯವಿರುವ ರೋಗಗಳ ನಿಯಂತ್ರಣಕ್ಕೆ ಬೇಕಾದ ವೈದ್ಯಕೀಯ, ಔಷಧ, ತಂತ್ರಜ್ಞಾನ ಹೊಂದುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ.
ಬಡ ಹಾಗೂ ಶ್ರೀಮಂತ ರಾಷ್ಟ್ರಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೀತಿಯಲ್ಲಿ ಅಸಮಾನತೆಯಿದೆ. ಕ್ಯಾನ್ಸರ್ ಪೀಡಿತರಿಗೆ ಆಯಾಯಾ ರಾಷ್ಟ್ರಗಳು ನೀಡುವ ವೈದ್ಯಕೀಯ ಸೇವೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಆರೋಗ್ಯ ಸಂಸ್ಥೆಯ ಸಹಾಯಕ ಮಹಾನಿರ್ದೇಶಕ ರೆನ್ ಮಿಂಗ್ಹುಯಿ ತಿಳಿಸಿದ್ದಾರೆ.
ಕ್ಯಾನ್ಸರ್ಗೆ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿದರೆ ಖಂಡಿತ ರೋಗಿಗಳನ್ನು ಬದುಕಿಸಬಹುದು. ಸರಿಯಾದ ತಪಾಸಣೆಯಿಂದ ರೋಗವನ್ನು ಶೀಘ್ರವೇ ಪತ್ತೆ ಮಾಡಬೇಕು. ಕ್ಯಾನ್ಸರ್ನಿಂದ ಎಲ್ಲರೂ ಸಾಯುವುದಿಲ್ಲ. ಆದರೆ ಇದಕ್ಕೆಲ್ಲ ಖಂಡಿತ ಸೂಕ್ತ ವೈದ್ಯಕೀಯ ವ್ಯವಸ್ಥೆ ಇರಬೇಕು ಎಂದು ಅವರು ಹೇಳಿದ್ದಾರೆ.
ಇಂದು ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ನಿಮಿತ್ತ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಮುಂದಿನ ದಶಕದಲ್ಲಿ ಸುಮಾರು 25 ಬಿಲಿಯನ್ ಡಾಲರ್ಗಳಷ್ಟನ್ನು ಕ್ಯಾನ್ಸರ್ ರೋಗ ನಿಯಂತ್ರಣ, ಚಿಕಿತ್ಸೆಗಾಗಿ ಹೂಡಿಕೆ ಮಾಡಿದರೆ ಸುಮಾರು 7 ಮಿಲಿಯನ್ ಜನರ ಪ್ರಾಣ ಕಾಪಾಡಬಹುದು.
ಕ್ಯಾನ್ಸರ್ ಎಂಬುದು ಜಾಗತಿಕ ಹೊರೆ. ಆದರೆ ಎಲ್ಲ ದೇಶಗಳ ಎಲ್ಲ ರೋಗಿಗಳಿಗೂ ಸಮಾನವಾಗಿ ಚಿಕಿತ್ಸೆ ದೊರೆಯಬೇಕು ಎಂದು ಡಬ್ಲ್ಯೂಎಚ್ಒ ಹೇಳಿದೆ.(ಪಿಟಿಐ)