ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಎರಡನೇ ದಿನವಾದ ಶನಿವಾರ ಗಣಿತ, ಶಿಕ್ಷಣಶಾಸ್ತ್ರದ ಪರೀಕ್ಷೆ ನಡೆದಿದ್ದು, 8,125 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ 2,43,410 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದು,
ಈ ಪೈಕಿ 2,35,285 ವಿದ್ಯಾರ್ಥಿಗಳು ಹಾಜರಾಗಿ ದ್ದಾರೆ. ಯಾವ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳು ನಕಲು ಮಾಡಿರುವ ಬಗ್ಗೆ ವರದಿಯಾಗಿಲ್ಲ. ಪ್ರಶ್ನೆಪತ್ರಿಕೆ ಕೂಡ ಸುಲಭವಾಗಿತ್ತು. ವಿದ್ಯಾರ್ಥಿಗಳಿಗೆ ಪಠ್ಯೇತರ ವಿಷಯವಾಗಿ ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಕಬ್ಬಿಣದ ಕಡಲೆ ಎಂದೇ ಬಿಂಬಿಸುವ ಗಣಿತದಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಬಹುದಾಗಿದೆ ಎಂದು ಗಣಿತ ವಿಷಯ ತಜ್ಞ ಬಿ. ಅನಂತಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿ ಗಳು ಸಹ ಪ್ರಶ್ನೆಪತ್ರಿಕೆ ಸುಲಭವಾಗಿದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಉಡುಪಿ: ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ಗಣಿತಶಾಸ್ತ್ರ ಪರೀಕ್ಷೆಗೆ 18 ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರ ಪೈಕಿ ವಿಜ್ಞಾನ ವಿಭಾಗದ ಮೂವರು (ಅಲ್ಮಾಸ್, ಹಜ್ರಾ, ಆಯೇಷಾ) ಶನಿವಾರ ಪರೀಕ್ಷೆಗೆ ಗೈರಾಗಿದ್ದಾರೆ. ಅಲ್ಮಾಸ್ ಶುಕ್ರವಾರ ಸಾಯಂಕಾಲ ಕಾಲೇಜಿನಿಂದ ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದರು. ಇನ್ನಿಬ್ಬರು ಹಾಲ್ ಟಿಕೆಟ್ ಕೂಡ ಪಡೆದುಕೊಂಡಿಲ್ಲ. ಇದೇ ಕಾಲೇಜಿನ ವಾಣಿಜ್ಯ ವಿಭಾಗದ ಆಲಿಯಾ ಅಸ್ಸಾದಿ ಮತ್ತು ರೇಶಾಮ್ ಹಾಲ್ ಟಿಕೆಟ್ ಪಡೆದುಕೊಂಡಿದ್ದರೂ ಶುಕ್ರವಾರ ಪರೀಕ್ಷೆಗೆ ಹಾಜರಾಗಲಿಲ್ಲ.