ನ್ಯೂಸ್

ಶೇ.80 ಜನರಿಗಿಲ್ಲ ಒಸಿ ಲಾಭ!

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರಕ್ಕೆ (ಒಸಿ) ವಿನಾಯಿತಿ ನೀಡಿರುವ ಸರ್ಕಾರದ ಆದೇಶದಿಂದ ಶೇ.80 ಜನರಿಗೆ ಅನುಕೂಲವೇ ಆಗಲ್ಲ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಐದು ಹೊಸ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,200 ಚದರ ಅಡಿಗಳ ವಿಸ್ತೀರ್ಣದ ಸೈಟ್‌ನಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಅನ್ವಯ ಆಗುವಂತೆ ಇತ್ತೀಚೆಗೆ ಸ್ವಾಧೀನಾನುಭವ ಪತ್ರ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು. ಆದರೆ, ಆ ಆದೇಶದಲ್ಲಿ 1,200 ಚದರ ಅಡಿಗಳ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಲಾಗಿರುವ ನೆಲ ಮಹಡಿ ಪ್ಲಸ್ 2 ಅಂತಸ್ತು ಅಥವಾ ಸ್ಟಿಲ್ಟ್ ಪ್ಲಸ್ 3 ಅಂತಸ್ತಿನ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯ ಎಂದು ಉಲ್ಲೇಖಿಸಲಾಗಿದೆ. ಈಗಾಗಲೇ ಕಟ್ಟಡ ನಿರ್ಮಾಣ ಮಾಡಿ ಗೃಹ ಪ್ರವೇಶಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕಾಗಿ ಕಾಯುತ್ತಿದ್ದವರಿಗೆ ಕಾದ ಎಣ್ಣೆ ಬಾಂಡಲಿಯಿಂದ ತಪ್ಪಿ ಬೆಂಕಿಗೆ ಬಿದ್ದಂಥ ಪರಿಸ್ಥಿತಿ ಎದುರಾಗಿದೆ.

ಮಹಾನಗರ ಮತ್ತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿಸಿ ಮತ್ತು ಒಸಿ ಪ್ರಮಾಣಪತ್ರ ಬೈಲಾದಲ್ಲಿ ಇದ್ದರೂ ಕಡ್ಡಾಯ ಮಾಡಿರಲಿಲ್ಲ. 5 ಸಾವಿರ ಚದರ ಅಡಿ ಕಟ್ಟಡಗಳಿಗೆ ವಾರಸುದಾರರೇ ಸ್ವಯಂ ಟಿಸಿ ಅಳವಡಿಸಿಕೊಂಡು ವಿದ್ಯುತ್ ಸಂಪರ್ಕ ಪಡೆಯುತ್ತಿದ್ದರು. ಉಳಿದಂತೆ ನಕ್ಷೆ ಮತ್ತು ಒಸಿ, ಸಿಸಿ ಇಲ್ಲದೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯುತ್ತಿದ್ದರು.

2025ರ ಏಪ್ರಿಲ್ 4ರಂದು ಸುಪ್ರೀಂ ಕೋರ್ಟ್ ಆದೇಶ ಬಂದಮೇಲೆ ರಾಜ್ಯದಲ್ಲಿ ಸಿಸಿ ಮತ್ತು ಒಸಿ ಪ್ರಮಾಣ ಕಡ್ಡಾಯ ಮಾಡಲಾಗಿತ್ತು. ಹೊಸ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಸಿಗದಂತೆ ಆಗಿತ್ತು. ಈಗಾಗಲೇ ಸಂಪರ್ಕ ಪಡೆದಿದ್ದ ವಾರಸುದಾರರು ಕಟ್ಟಡಗಳನ್ನು ಪೂರ್ಣ ಮಾಡಿ ಗೃಹಪ್ರವೇಶ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಆದೇಶ ದೊಡ್ಡ ಸವಾಲಾಗಿತ್ತು.

ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2024ರ ಕಲಂ 241(7) ಅಡಿಯಲ್ಲಿ 1200 ಚದರಡಿ ವಿಸ್ತೀರ್ಣದ ಸೈಟ್‌ನಲ್ಲಿ ನಿರ್ಮಿಸಲಾಗಿರುವ ನೆಲ ಪ್ಲಸ್ 2 ಅಂತಸ್ತು ಅಥವಾ ಸ್ಟಿಲ್ಟ್ ಪ್ಲಸ್ 3 ಅಂತಸ್ತಿನ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಿದೆ. ಇದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ‘ಬಹು’ಕಟ್ಟಡಗಳಿಗಿಲ್ಲ ಪ್ರಯೋಜನ

1200 ಚದರ ಅಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿದರೂ ಶೇ.80 ವಸತಿ ಕಟ್ಟಡಗಳಿಗೆ ಈ ಆದೇಶದಿಂದ ಪ್ರಯೋಜನವಿಲ್ಲ. ನೆಲ ಮಹಡಿ ಪ್ಲಸ್ 2 ಅಂತಸ್ತು ಅಥವಾ ಸ್ಟಿಲ್ಟ್ ಪ್ಲಸ್ 3 ಮಹಡಿ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದೇಶ ಪ್ರಕಾರ, ನೆಲ ಮಹಡಿ ಅಥವಾ ಸ್ಟಿಲ್ಟ್‌ನಲ್ಲಿ (ಟೆರೆಸ್) ಖಾಲಿ ಬಿಟ್ಟಿರಬೇಕು. ನೆಲ ಮಹಡಿಯಲ್ಲಿ ಪಾರ್ಕಿಂಗ್ ಜತೆಗೆ ರೂಮ್ ಮತ್ತು ಶೌಚಗೃಹ ನಿರ್ಮಾಣ ಮಾಡಿದ್ದರೆ ಅಥವಾ ಸ್ಟಿಲ್ಟ್‌ನಲ್ಲಿ ರೂಮ್ ನಿರ್ಮಾಣ ಮಾಡಿದ್ದರೇ ಷರತ್ತು ಉಲ್ಲಂಘನೆ ಆಗಲಿದೆ. ಆಗ ಸರ್ಕಾರ ವಿನಾಯಿತಿ ಅನ್ವಯ ಆಗುವುದಿಲ್ಲ. ಆದರಿಂದ ಈಗಾಗಲೇ 1,200 ಚದರಡಿ ಸೈಟ್‌ನಲ್ಲಿ ಕಟ್ಟಡ ನಿರ್ಮಾಣ ಮಾಡಿದವರಿಗೆ ಒನ್ ಟೈಮ್ ಮಹಡಿ ಲೆಕ್ಕಕ್ಕೆ ಪಡೆಯದೆ ವಿನಾಯಿತಿ ಕೊಡಬೇಕು. ಭವಿಷ್ಯದಲ್ಲಿ ಕಟ್ಟುವರಿಗೆ ಷರತ್ತು ವಿಧಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

4.50 ಲಕ್ಷ ಅರ್ಜಿ ಬಾಕಿ

ಬೆಸ್ಕಾಂ ವ್ಯಾಪ್ತಿಯಲ್ಲೇ ಏಪ್ರಿಲ್ 4ರಿಂದ ವಿದ್ಯುತ್ ಸಂಪರ್ಕಕ್ಕಾಗಿ 4.50 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಇದರಲ್ಲಿ 1,200 ಅಡಿಯಲ್ಲಿ ಮನೆ ನಿರ್ಮಾಣ ಮಾಡಿದವರಿಗೆ ಅನುಕೂಲವಾಗಲಿದೆ. ಷರತ್ತು ಉಲ್ಲಂಘನೆ ಆಗಿದ್ದರೆ ಮತ್ತೆ ಸಿಸಿ ಮತ್ತು ಒಸಿ ಪ್ರಮಾಣ ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಬರಲಿದೆ.

ಒಸಿ ಯಾಕೇ ಅನ್ವಯ ಆಗುತ್ತಿಲ್ಲ ?

-ಸರ್ಕಾರದ ಆದೇಶಕ್ಕೂ ಮೊದಲು ಕಟ್ಟಡ ನಿರ್ಮಾಣ ಮಾಡಿರುವುದು

-ಸ್ವಂತಕ್ಕೆ ಆಗಿದ್ದರೂ ನೆಲ ಅಥವಾ ಟೆರೆಸ್‌ನಲ್ಲಿ ಸಣ್ಣದೊಂದು ಬಾಡಿಗೆ ಮನೆ ನಿರ್ಮಾಣ

-ಅತಿಥಿಗಳಿಗೆ ರೂಮ್, ಶೌಚಗೃಹ ನಿರ್ಮಾಣ ಮಾಡಿರುವುದು ಸರ್ವೇಸಾಮಾನ್ಯ

-ಜೀವನ ಸಾಗಿಸಲು ಸಿಂಗಲ್ ಬೆಡ್ ರೂಮ್ ಬಾಡಿಗೆ ಮನೆ ನಿರ್ಮಾಣ

-ಮನೆಗೆಲಸದವರಿಗೆ, ಸೆಕ್ಯೂರಿಟಿ ಗಾರ್ಡ್‌ಗೆಂದು ಕೊಠಡಿ ಕಟ್ಟಿರುವುದು