ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ಟಾಕ್ ಮಾರ್ಕೆಟ್‌ನಲ್ಲಿ 80 ಲಕ್ಷ ರೂ. ಹೂಡಿಕೆ ಮಾಡಿ ಮಹಿಳೆ ಸೈಬರ್ ವಂಚನೆಗೆ ಒಳಗಾಗಿದ್ದಾರೆ.
ದೇವರಬೀಸನಹಳ್ಳಿಯ 37 ವರ್ಷ ಮಹಿಳೆ ವಂಚನೆಗೆ ಒಳಗಾದವಳು. ಈಕೆ ಕೊಟ್ಟ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜೂ. 20ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಗೆ ಲಿಂಕ್‌ವೊಂದು ಬಂದಿತ್ತು. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಈಕೆಯ ಮೊಬೈಲ್ ನಂಬರ್ ಸೇರಿದ್ದು, ಅದರಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ತರಬೇತಿ ನೀಡುವುದಾಗಿ ನಂಬಿಸಲಾಗಿತ್ತು. ತರಬೇತಿ ನೆಪದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ ಸೈಬರ್ ಕಳ್ಳರು, ಮತ್ತೊಂದು ಲಿಂಕ್ ಕಳುಹಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಣ ಹೂಡಲು ಸಲಹೆ ನೀಡಿದ್ದರು. ಇದನ್ನು ನಂಬಿದ ಮಹಿಳೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಾಗ ನೋಂದಣಿ ಶುಲ್ಕವೆಂದು 500 ರೂ. ಪಡೆದುಕೊಂಡಿದ್ದರು.
ಇದಾದ ಮೇಲೆ ಆ್ಯಪ್‌ನಲ್ಲಿ ಮಹಿಳೆ ಹೆಸರಿನಲ್ಲಿ ಖಾತೆ ತೆರೆದು ಅಲ್ಲಿಂದ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡು ಲಾಭಾಂಶ ಎಂದು ಆ್ಯಪ್‌ನಲ್ಲಿನ ಖಾತೆಗೆ ಜಮೆ ಮಾಡುತ್ತ ಆಸೆ ಹುಟ್ಟಿಸಿದ್ದರು. ಹೆಚ್ಚಿನ ಲಾಭಾಂಶ ಸಿಗುತ್ತಿದೆ ಎಂದು ನಂಬಿದ ಮಹಿಳೆ, ಆರೋಪಿಗಳು ಕೊಟ್ಟ 10 ವಿವಿಧ ಬ್ಯಾಂಕ್ ಖಾತೆಗೆ ಬರೋಬ್ಬರಿ 80 ಲಕ್ಷ ರೂ. ಹೂಡಿಕೆ ಮಾಡಿದ್ದಳು. ಇತ್ತೀಚೆಗೆ ಲಾಭಾಂಶವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ.
ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಚಾರಣೆ ನಡೆಸಿದಾಗ ಮತ್ತಷ್ಟು ಹೂಡಿಕೆ ಮಾಡಿದರೆ ವಿತ್ ಡ್ರಾ ಮಾಡಲು ಸಾಧ್ಯ ಎಂದು ಸಬೂಬು ಹೇಳಿದ್ದರು. ಅನುಮಾನ ವ್ಯಕ್ತವಾಗಿ ಮಹಿಳೆ, ವಿತ್ ಡ್ರಾ ಮಾಡಬೇಕೆಂದು ಪಟ್ಟು ಹಿಡಿದಾಗ ಆ್ಯಪ್ ಸರ್ವರ್ ಡೌನ್ ಮಾಡಿ ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ಮಹಿಳೆ, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.