ನ್ಯೂಸ್

ತನ್ನ ಹತ್ತು ತಿಂಗಳ ಉಳಿತಾಯದ ಹಣವನ್ನು ಭಾರತೀಯ ಸೇನೆಗೆ ನೀಡಿದ 8 ವರ್ಷದ ಬಾಲಕ | Indian Army

Indian Army: ಎಂಟು ವರ್ಷದ ಬಾಲಕನೊಬ್ಬ ತನ್ನ 10 ತಿಂಗಳ ಉಳಿತಾಯವನ್ನು ಭಾರತೀಯ ಸೇನೆಗೆ ದಾನ ಮಾಡಲು ನಿರ್ಧರಿಸಿದ ಹೃದಯಸ್ಪರ್ಶಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕರೂರಿನ 8 ವರ್ಷದ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ನಿಸ್ವಾರ್ಥವಾಗಿ ತನ್ನ 10 ತಿಂಗಳ ಉಳಿತಾಯವನ್ನು ಭಾರತೀಯ ಸೇನೆಗೆ ದಾನ ಮಾಡಲು ಮುಂದಾಗಿದ್ದು, ಇದು ದೇಶದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.

ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈ ಬಾಲಕ ಕಳೆದ 10 ತಿಂಗಳುಗಳಿಂದ ತನ್ನ ಪಾಕೆಟ್ ಮನಿ ಹಾಗೂ ಕುಟುಂಬ ಸದಸ್ಯರಿಂದ ಕೊಡುತ್ತಿದ್ದ ಹಣವನ್ನು ಸ್ವಲ್ಪ ಸ್ವಲ್ಪವೇ ಕೂಡಿಡುತ್ತಿದ್ದ. ಅಂತಿಮವಾಗಿ ಕೂಡಿಟ್ಟ ಹಣ ಕಡಿಮೆಯಾದರೂ ಸಹ ಆ ಪುಟ್ಟ ಬಾಲಕನ ಉದ್ದೇಶದಲ್ಲಿ ದೇಶಭಕ್ತಿ ಕಾಣುತ್ತದೆ.

ರಾಷ್ಟ್ರವನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ತ್ಯಾಗಗಳ ಬಗ್ಗೆ ತಿಳಿದುಕೊಂಡ ನಂತರ ಅವನಿಗೆ ಕೊಡುಗೆ ನೀಡುವ ಬಯಕೆ ಉಂಟಾಯಿತು. ಕೃತಜ್ಞತೆ ಮತ್ತು ಗೌರವದ ಸಂಕೇತವಾಗಿ, ದೇಶವನ್ನು ರಕ್ಷಿಸುವ ಸೈನಿಕರ ಬೆಂಬಲಕ್ಕಾಗಿ ತನ್ನ ಸಂಪೂರ್ಣ ಉಳಿತಾಯವನ್ನು ನೀಡಲು ಆ ಪುಟ್ಟ ಬಾಲಕ ಮುಂದಾಗಿದ್ದಾನೆ.

ಧೈರ್ಯ ಮತ್ತು ದೃಢನಿಶ್ಚಯದಿಂದ ಬಾಲಕ ತನ್ನ ಉಳಿತಾಯದ ಹಣವನ್ನು ತುಂಬಿದ ನೀರಿನ ಪೆಟ್ಟಿಗೆಯನ್ನು ಹೊತ್ತುಕೊಂಡು ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿದಾಗ, ಅವನ ಈ ಉದ್ದೇಶ ತಿಳಿದು ಭಾವುಕರಾದ ಜಿಲ್ಲಾಧಿಕಾರಿ ಮಗುವಿನ ನಿಸ್ವಾರ್ಥತೆ ಮತ್ತು ಔದಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆ ಪುಟ್ಟ ಬಾಲಕ "ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದೇನೆ. ನಮ್ಮನ್ನು ರಕ್ಷಿಸುವವರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ, ಆದ್ದರಿಂದ ನಾನು ನನ್ನ ಎಲ್ಲಾ ಹಣವನ್ನು ಸೇನಾ ಸೈನಿಕನಿಗೆ ನೀಡಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾನೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತಿದ್ದಂತೆಯೇ, ದೇಶಾದ್ಯಂತ ಜನರು ಆ ಬಾಲಕನ ಕೆಲಸವನ್ನು ಕೊಂಡಾಡಿದ್ದಾರೆ. ಒಬ್ಬ ಬಳಕೆದಾರರು, "ಅವನು ತನ್ನ ಜೀವನದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಬೇಕೆಂದು ನಾನು ಬಯಸುತ್ತೇನೆ. ಸ್ಪೂರ್ತಿದಾಯಕ ಮಗು, ಮತ್ತು ಅದರ ಶ್ರೇಯಸ್ಸು ಅವನ ಹೆತ್ತವರಿಗೆ ಮತ್ತು ಇತರ ಎಲ್ಲ ಹಿರಿಯರಿಗೂ ಸಲ್ಲುತ್ತದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಎಂತಹ ಸ್ಪೂರ್ತಿದಾಯಕ ಯುವಕ! ದೇಶವು ಸುರಕ್ಷಿತ ಕೈಯಲ್ಲಿದೆ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿದೆ!" ಎಂದು ಸಂತೋಷದಿಂದ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)