ನ್ಯೂಸ್

ಪಟಾಕಿ ಸಿಡಿಸಲು ರಾತ್ರಿ 8 ರಿಂದ 10 ನಿಗದಿ

ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪಟಾಕಿ ಖರೀದಿ ಮತ್ತು ಸಿಡಿಸಲು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಲಹೆ-ಸೂಚನೆಗಳನ್ನು ಹೊರಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಬಿ. ದಯಾನಂದ್, ನಗರದ 74 ನಿಗದಿತ ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಪಟಾಕಿ ಮಾರಾಟಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿತ್ತು. ಅನುಮತಿ ಕೋರಿ ಬಂದಿದ್ದ 1,518 ಅರ್ಜಿಗಳ ಪೈಕಿ ಲಾಟರಿ ಮೂಲಕ 315 ಅರ್ಜಿಗಳನ್ನು ಪರಿಗಣಿಸಲಾಗಿದೆ.

ಪಟಾಕಿ ಮಾರಾಟಕ್ಕೆ ನಿಗದಿತ ಸ್ಥಳಗಳಲ್ಲಿ ಎಸಿಪಿ ದರ್ಜೆ ಅಧಿಕಾರಿ, ಬಿಬಿಎಂಪಿ, ವಿದ್ಯುತ್ ಇಲಾಖೆ, ಅಗ್ನಿ ಶಾಮಕ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಹಾಜರಿರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ದೀಪಾವಳಿ ಆಚರಣೆ ವೇಳೆ ಜನರು ಸುರಕ್ಷತಾ ಕ್ರಮಗಳನ್ನು ವಹಿಸಬೇಕೆಂದು ನಗರ ಪೊಲೀಸರು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಬಾಕ್ಸ್ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಸಿರು ಪಟಾಕಿ ಎಂಬುದನ್ನು ಖಚಿತ ಪಡಿಸಿಕೊಂಡು ಬಳಿಕ ಖರೀದಿಸಿ. ಪರವಾನಗಿ ಅಂಗಡಿ/ಮಳಿಗೆಗಳಿಂದ ಪಟಾಕಿ ಖರೀದಿಸುವುದು ಒಳಿತು. ಅತಿ ಹೆಚ್ಚು ಶಬ್ದ ಮತ್ತು ವಾಯುಮಾಲಿನ್ಯ ಉಂಟು ಮಾಡುವ ಪಟಾಕಿಗಳ ಖರೀದಿಸಬೇಡಿ. ಹಳೆಯ ಪಟಾಕಿ ಬಳಸಬೇಡಿ. ಚಿಕ್ಕ ಮಕ್ಕಳು ಹಚ್ಚಲು ಅವಕಾಶ ಮಾಡಿಕೊಡಬೇಡಿ. ಅವರ ಜತೆಗೆ ಪಾಲಕರು ಇದ್ದು ಸುರಕ್ಷಿತವಾಗಿ ಪಟಾಕಿ ಹಚ್ಚುವಂತೆ ಗಮನ ಹರಿಸಬೇಕು.

ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ಉದ್ದನೆಯ ಊದುಬತ್ತಿಗಳನ್ನು ಬಳಸಬೇಕು.ಜನನಿಬಿಡ ಪ್ರದೇಶ, ಮುಖ್ಯ ರಸ್ತೆಗಳಲ್ಲಿ ಮತ್ತು ವಾಹನಗಳ ಪಾರ್ಕಿಂಗ್ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ತೆರೆದ ಮೈದಾನಗಳಲ್ಲಿ, ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಪಟಾಕಿಗಳನ್ನು ಹಚ್ಚುವುದು ಉತ್ತಮ.

ಆಸ್ಪತ್ರೆ, ಪೆಟ್ರೋಲ್ ಬಂಕ್, ಅನಿಲ ಕೇಂದ್ರಗಳು, ಧಾರ್ಮಿಕ ಸ್ಥಳ, ವೃದ್ಧಾಶ್ರಮ, ಶಿಶುಪಾಲನಾ ಕೇಂದ್ರಗಳ ಸುತ್ತ-ಮುತ್ತ ಪಟಾಕಿಗಳನ್ನು ಸಿಡಿಸದಂತೆ ಸೂಚಿಸಿದ್ದಾರೆ. ಪಟಾಕಿಗಳನ್ನು ಹಚ್ಚುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೂಕ ಪ್ರಾಣಿಗಳಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು, ಕೈಗೆ ಗ್ಲೌಸ್ ಧರಿಸುವುದು, ಕಣ್ಣುಗಳಿಗೆ ಸುರಕ್ಷತಾ ಕನ್ನಡಕ ಧರಿಸುವುದು, ಅಗ್ನಿ ನಂದಿಸುವ ನೀರು, ಮರಳು, ಬೆಂಕಿನಂದಿಸುವ ಸಿಲಿಂಡರ್ ಹತ್ತಿರದಲ್ಲಿ ಇಟ್ಟುಕೊಳ್ಳುವುದು ಉತ್ತಮ ಎಂದು ಬಿ. ದಯಾನಂದ್ ಸಲಹೆ ನೀಡಿದ್ದಾರೆ.

ತುರ್ತು ಕರೆ ಮಾಡಿ :

ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅನಾಹುತ ಸಂಭವಿಸಿದಲ್ಲಿ ತಕ್ಷಣವೇ ಪೊಲೀಸ್ ಸಹಾಯವಾಣಿ 112 ಮತ್ತು 108 ಸಹಾಯವಾಣಿಗೆ ಕರೆ ಮಾಡಿದರೆ ಸಹಾಯಕ್ಕೆ ಧಾವಿಸಲಿದ್ದಾರೆ. ಬಿಬಿಎಂಪಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣಾ ಇಲಾಖೆಗಳಿಂದ ನೀಡಿರುವ ಆದೇಶ ಮತ್ತು ಸಲಹಾ -ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.