ನ್ಯೂಸ್

ಮಣಿಪುರದಲ್ಲಿ ನಿಷೇಧಿತ ಸಂಘಟನೆಗೆ ಸೇರಿದ 8 ಉಗ್ರರ ಬಂಧನ| Manipur

Manipur: ಮಣಿಪುರದ ವಿವಿಧ ಜಿಲ್ಲೆಗಳ ನಾಲ್ಕು ನಿಷೇಧಿತ ಸಂಘಟನೆಗಳಿಗೆ ಸೇರಿದ 8 ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಸೋಮವಾರ (ಆಗಸ್ಟ್ 4) ತಿಳಿಸಿದ್ದಾರೆ.

ಪೂರ್ವ ಮತ್ತು ಪಶ್ಚಿಮ ಇಂಫಾಲ್ ಹಾಗೂ ಬಿಷ್ಣುಪುರ ಜಿಲ್ಲೆಗಳ ವಿವಿಧ ಸ್ಥಳಗಳಿಂದ ಕೆಸಿಪಿ ಸಂಘಟನೆಯ ಐದು ಸಕ್ರಿಯ ಕಾರ್ಯಕರ್ತರನ್ನು ಭದ್ರತಾ ಪಡೆಗಳು ಹೆಡೆಮುರಿ ಕಟ್ಟಿವೆ.

ಬಂಧಿತ ಉಗ್ರರು ಸುಲಿಗೆ, ಅಪಹರಣ ಮತ್ತು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಹೊಂದಿದ್ದ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಇವರನ್ನು ಪ್ರೇಮ್‌ಕುಮಾರ್ ಸಿಂಗ್, ಯಂಬೆಮ್ ಶೀತಲ್ ಸಿಂಗ್, ಸೊರೊಖೈಬಮ್ ಇನಾಟೊನ್ ಸಿಂಗ್, ಖೊಂಗ್‌ಬಂಟಬಮ್ ಇನಾಚಾ ದೇವಿ ಮತ್ತು ಓಯಿನಮ್ ನವೋಬಾ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. ಬಂಧಿತ ಉಗ್ರರಿಂದ ಒಂದು 9 ಎಂಎಂ ಪಿಸ್ತೂಲ್ ಹಾಗೂ ಒಂದು ಮ್ಯಾಗ್​ಜೀನ್ ಮತ್ತು ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಪಶ್ಚಿಮ ಇಂಫಾಲ್ ಜಿಲ್ಲೆಯ ಹಾವೊಬಮ್ ಮರಕ್‌ನಲ್ಲಿರುವ ನಿವಾಸದಿಂದ ಪೊಲೀಸರು ತೈಬಂಗನ್ಬಾ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹೈಸ್ನಾಮ್ ಬೊಬೊ ಸಿಂಗ್​ನನ್ನು ಬಂಧಿಸಿದ್ದಾರೆ. ಈ ಉಗ್ರಗಾಮಿಯು, ಇಂಫಾಲ್ ಕಣಿವೆಯ ಶಾಲೆಗಳಿಂದ ಸುಲಿಗೆ ಹಣವನ್ನು ಸಂಗ್ರಹಿಸುವುದರಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದು ಬಂದಿದೆ.

ಅಲ್ಲದೆ,  ಪೂರ್ವ ಇಂಫಾಲ್ ಜಿಲ್ಲೆಯ ಇಥಮ್ ಥೋಂಗ್‌ಖಾಂಗ್‌ನಿಂದ ನಿಷೇಧಿತ PREPAK ನ ಸಕ್ರಿಯ ಕಾರ್ಯಕರ್ತ ಸೊರೊಖೈಬಮ್ ರೋಹಿತ್ ಮೈಟೈನನ್ನು ಬಂಧಿಸಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯ ಲ್ಯಾಮ್ಲೈ ಚಿಂಗ್ಖುನಲ್ಲಿರುವ ನಿವಾಸದ ಬಳಿ ಇರುವ ಜಮೀನಿನಿಂದ ನಿಷೇಧಿತ ಕೆಸಿಪಿ ಸಂಘಟನೆಯ ಸಕ್ರಿಯ ಕಾರ್ಯಕರ್ತ ನೆಪ್ರಮ್ ಹರಿ ಮೈಟೈನನ್ನು ಭದ್ರತಾ ಪಡೆಗಳು ಬಂಧಿಸಿವೆ.(ಏಜೆನ್ಸೀಸ್)