ನ್ಯೂಸ್

ಉಗ್ರ ಟಿ. ನಾಸೀರ್ ಸೇರಿ ೮ ಶಂಕಿತರು ತಪ್ಪೊಪ್ಪಿಗೆ ಹೇಳಿಕೆ ಅರ್ಜಿ ಸಲ್ಲಿಕೆ

ಮಂಜುನಾಥ.ಕೆ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದುಕೊಂಡೆ ಬೆಂಗಳೂರು ಸೇರಿ ದೇಶದ ಹಲವೆಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೊಳಗಾಗಿರುವ ಎಲ್‌ಇಟಿ ಉಗ್ರ ಟಿ. ನಾಸೀರ್ ಸೇರಿ ೮ ಮಂದಿ ಶಂಕಿತರು ತಪ್ಪೊಪ್ಪಿಗೆ ಹೇಳಿಕೆ ದಾಖಲಿಸುವುದಾಗಿ ಎನ್‌ಎಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ಜುಲೈ ೧೬ಕ್ಕೆ ವಿಚಾರಣೆ ಮುಂದೂಡಿದೆ.

ಈ ಮಧ್ಯೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿರುವ ಅನೀಸ್ ಫಾತೀಮಾ, ಎಎಸ್‌ಐ ಚಾನ್ ಪಾಷಾ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್‌ನನ್ನು ಎನ್‌ಐಎ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಟಿ.ನಾಸೀರ್, ಸೈಯದ್ ಸುಹೈಲ್(೨೪), ಮೊಹಮ್ಮದ್ ಉಮರ್(೩೦), ಜಾಹಿದ್ ತಬ್ರೇಜ್(೨೭) ಸೈಯದ್ ಮುದಾಸೀರ್ ಪಾಷಾ(೨೯), ಮೊಹಮ್ಮದ್ ಫೈಸಲ್(೨೯), ಸಲ್ಮಾನ್ ಖಾನ್(೨೮) ಮತ್ತು ೨೦೨೧ರಲ್ಲಿ ದೆಹಲಿಯ ವಿಶೇಷ ತನಿಖಾ ತಂಡದಿಂದ ಬಂಧನಕ್ಕೊಳಗಾದ ವಿಕ್ರಂ ಕುಮಾರ್ ಅಲಿಯಾಸ್ ಛೋಟಾ ಉಸ್ಮಾನ್(೨೮) ತಪ್ಪೊಪ್ಪಿಗೆ ಹೇಳಿಕೆ ನೀಡುವುದಾಗಿ ಜು.೮ರಂದೇ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ತಾವುಗಳು ಯಾರ ಬಲವಂತದಿಂದ ಅರ್ಜಿ ಸಲ್ಲಿಸಿಲ್ಲ. ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ಈ ಎಂಟು ಶಂಕಿತರನ್ನು ಬುಧವಾರ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಆ ದಿನ ನ್ಯಾಯಾಲಯ ಶಂಕಿತ ತಪ್ಪೊಪ್ಪಿಗೆ ಹೇಳಿಕೆಯನ್ನು ಕೇಳುತ್ತದೆ ಎಂದು ಮೂಲಗಳು ತಿಳಿಸಿವೆ.