ನ್ಯೂಸ್

ಬೇನಾಮಿ ಭ್ರಷ್ಟಾಚಾರ; ಅಂಬೇಡ್ಕರ್ ಅಭಿವೃದ್ಧಿ ನಿಗಮದ 8 ಅಧಿಕಾರಿಗಳ ಸಸ್ಪೆಂಡ್, ಐವರು ಎತ್ತಂಗಡಿ

ಬೆಂಗಳೂರು: ಪರಿಶಿಷ್ಟ ಜಾತಿ, ಸಮುದಾಯದವರ ಅಭಿವೃದ್ಧಿಗಾಗಿ ರಚನೆಯಾಗಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭ್ರಷ್ಟಾಚಾರದ ಮಸಿ ಮೆತ್ತಿದೆ. ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿರುವ ವಿವಿಧ ಪ್ರಕರಣಗಳ ಸಂಬಂಧ ರಾಜ್ಯ ಸರ್ಕಾರ ಇಬ್ಬರು ಜಿಲ್ಲಾ ವ್ಯವಸ್ಥಾಪಕರು ಸೇರಿ 8 ಅಧಿಕಾರಿಗಳನ್ನು ಅಮಾನತು ಮಾಡಿದ್ದರೆ, ಐವರು ಸಿಬ್ಬಂದಿಯನ್ನು ಬೇರೆ ಕಡೆಗೆ ಎತ್ತಂಗಡಿ ಮಾಡಿದೆ. 2019-20, 2020-21ರ ಅವಧಿಯಲ್ಲಿನ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ನಡೆದ ಅಕ್ರಮಗಳ ಬಗ್ಗೆ 2021-22ರಲ್ಲಿ ನಿಗಮದ ಕೇಂದ್ರ ಕಚೇರಿ ಮೂಲಕ ತಪಾಸಣೆ ಕೈಗೊಳ್ಳಲಾಗಿತ್ತು.

ಏನಿದು ಪ್ರಕರಣ?

  1. ನಿಗಮದ ರಾಯಚೂರು ಜಿಲ್ಲಾ ಕಚೇರಿಯಲ್ಲಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಅಕ್ರಮ ದಾಖಲೆ ಸೃಷ್ಟಿಸಿ ಬೇನಾಮಿ ಖಾತೆಗಳಿಗೆ 55 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ಕೇಂದ್ರ ಕಚೇರಿಗೆ ದೂರು ದಾಖಲಾಗಿತ್ತು. ಬಳಿಕ ಕೇಂದ್ರ ಕಚೇರಿ ತಪಾಸಣೆ ತಂಡ, ರಾಯಚೂರು ಜಿಲ್ಲಾ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿ ಹಣ ದುರುಪಯೋಗ ಮತ್ತು ಕಡತಗಳ ನಾಪತ್ತೆ ಸೇರಿ ಅಕ್ರಮಗಳ ನಡೆದಿರುವುದನ್ನು ಪತ್ತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ವ್ಯವಸ್ಥಾಪಕ ಈಶ್ವರಪ್ಪ ಕಟ್ಟಿಮನಿ ಹಾಗೂ ತಾಲೂಕು ಅಭಿವೃದ್ಧಿ ಅಧಿಕಾರಿ ಶರಣಪ್ಪನನ್ನು ಸೆಸ್ಪಂಡ್ ಮಾಡಲಾಗಿದೆ.
  2. ಕಲಬುರಗಿ ಜಿಲ್ಲಾ ಕಚೇರಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಬ್ಯಾಂಕ್ ಚೆಕ್ ಮತ್ತು ಆರ್​ಟಿಜಿಎಸ್​ಗಳನ್ನು ಬೇನಾಮಿ ವ್ಯಕ್ತಿಗಳ ಮೂಲಕ ನಗದು ಮಾಡಿಕೊಳ್ಳಲು ಪ್ರಯತ್ನಿಸಿದ್ದ ಪ್ರಕರಣ ಸಂಬಂಧ ಬ್ಯಾಂಕ್ ಅಧಿಕಾರಿಗಳು ನಿಗಮಕ್ಕೆ ಮೌಖಿಕ ದೂರು ನೀಡಿದ್ದರು. ಇದನ್ನು ಆಧರಿಸಿ ಕೇಂದ್ರ ಕಚೇರಿಯ ತಪಾಸಣಾ ತಂಡ ಸಾಂಸ್ಥಿಕ ಕೋಟಾದಡಿ ಮಂಜೂರಾಗಿರುವ ಹೈನುಗಾರಿಕೆ ಮತ್ತು ಐರಾವತ ಯೋಜನೆಗಳ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಖಾತೆಗಳಿಗೆ ಲಕ್ಷಾಂತರ ರೂ.ಹಣ ವರ್ಗಾ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಮುನಾವರ್ ದೌಲ ಮತ್ತು ಹೆಚ್ಚುವರಿ ತಾಲೂಕು ಅಭಿವೃದ್ಧಿ ಅಧಿಕಾರಿ ದೇವರಾಜ್​ನನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಗುತ್ತಿಗೆ ನೌಕರರಾದ ವಿಜಯಕುಮಾರ್, ಚೇತನ್ ಎಂಬುವವರನ್ನು ವರ್ಗಾವಣೆ ಮಾಡಲಾಗಿದೆ.
  3. ತುಮಕೂರು ಜಿಲ್ಲಾ ಕಚೇರಿಯಲ್ಲಿ ಐರಾವತ ಯೋಜನೆಯಡಿ 4.26 ಕೋಟಿ ರೂ.ಗಳನ್ನು ಬೇನಾಮಿ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಪ್ರಕರಣ ಸಂಬಂಧ ಜಿಲ್ಲಾ ವ್ಯವಸ್ಥಾಪಕ ಜಯಣ್ಣ ಮತ್ತು ಕಚೇರಿ ಅಧೀಕ್ಷಕಿ ವೆನ್ನಿಲಾ ಎಂಬಾಕೆಯನ್ನು ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಹೊರ ಗುತ್ತಿಗೆ ನೌಕರರಾದ ಮಹಾಂತೇಶ್, ಸರಸ್ವತಿ ಮತ್ತು ಸೋಮಶೇಖರ್​ನನ್ನು ಮಾತೃ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ.
  4. ಕೋಲಾರ ಜಿಲ್ಲಾ ಕಚೇರಿಯಲ್ಲಿ ನೇರಸಾಲ ಯೋಜನೆಯಡಿ ಸಾಂಸ್ಥಿಕ ಕೋಟಾದಲ್ಲಿ ಆಯ್ಕೆಯಾದ 2,604 ಫಲಾನುಭವಿಗಳಿಗೆ ಹಸು, ಎಮ್ಮೆ, ಕುರಿ ಮತ್ತು ಮೇಕೆ ವಿತರಣೆಯಲ್ಲಿ 10.41 ಕೋಟಿ ರೂ. ಅಕ್ರಮ ನಡೆದಿತ್ತು. ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ತನಿಖೆಯಲ್ಲಿ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ವ್ಯವಸ್ಥಾಪಕ ವಿಜಯ್ಕುಮಾರ್ ಮತ್ತು ತಾಲೂಕು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣನನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಡಿ ಇನ್ನೂ 4 ನೌಕರರ ವಿರುದ್ಧ ವಿಚಾರಣೆ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳು ಬೇರೆ ಜಿಲ್ಲೆಗಳಲ್ಲೂ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ನಿಗಮ ತನಿಖೆಯನ್ನು ಕೈಗೊಂಡಿದೆ.