ಸಾಂದರ್ಭಿಕ ಚಿತ್ರ 
ನ್ಯೂಸ್

ಕ್ಯಾಸಿನೋದಲ್ಲಿ 25 ಲಕ್ಷ ಗೆದಿದ್ದ ಟೀ ವ್ಯಾಪಾರಿಯನ್ನು ಅಪಹರಿಸಿ 15 ಲಕ್ಷ ಸುಲಿಗೆ ಮಾಡಿದ್ದ ರೌಡಿ ಸೇರಿ 8 ಮಂದಿ ಬಂಧನ

ಬೆಂಗಳೂರು : ಗೋವಾದ ಕ್ಯಾಸಿನೋದಲ್ಲಿ ಜೂಜಾಡಿ 25 ಲಕ್ಷ ರೂ. ಗೆದ್ದಿದ್ದ ಸ್ನೇಹಿತನನ್ನೇ ಅಪಹರಿಸಿ 15 ಲಕ್ಷ ರೂ. ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ರೌಡಿ ಸೇರಿ 8 ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ ಠಾಣೆ ರೌಡಿ ಕಾರ್ತಿಕ್ ಅಲಿಯಾಸ್ ಸೈಕೋ, ರಾಹುಲ್ ಅಲಿಯಾಸ್ ಪಾಂಡು, ನಿಶ್ಚಿಲ್, ರಾಹುಲ್, ಮೋಹನ್, ತರುಣ್‌ಗೌಡ, ರಾಮ್‌ಕುಮಾರ್ ಅಲಿಯಾಸ್ ದೀಪು ಹಾಗೂ ಮನೋಜ್ ಕುಮಾರ್ ಬಂಧಿತರು. ಆ.5ರಂದು ತ್ಯಾಗರಾಜನಗರದ ತಿಲಕ್ ಮಣಿಕಂಠ(32) ಎಂಬಾತನನ್ನು ಅಪಹರಿಸಿ ಆತನ ಖಾತೆಯಲ್ಲಿದ್ದ 25 ಲಕ್ಷ ರೂ. ಪೈಕಿ 15 ಲಕ್ಷ ರೂ. ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು, ಈ ವಿಚಾರ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಗರಾಜನಗರದಲ್ಲಿ ರಸ್ತೆಬದಿ ಟೀ ಮಾರಾಟಗಾರ ತಿಲಕ್ ಮಣಿಕಂಠಗೆ ಗೋವಾ ಕ್ಯಾಸಿನೋದಲ್ಲಿ ಜೂಜಾಡುವ ಅಸೆ ಇತ್ತು. 4 ಲಕ್ಷ ರೂ. ಹೊಂದಿಸಿಕೊಂಡು ಜು.30ರಂದು ಸ್ನೇಹಿತರೊಂದಿಗೆ ಗೋವಾಕ್ಕೆ ವಿಮಾನದಲ್ಲಿ ತೆರಳಿ ಕ್ಯಾಸಿನೋದಲ್ಲಿ ಜೂಜಾಡಿ 25 ಲಕ್ಷ ರೂ. ಗೆದ್ದಿದ್ದ.

ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿ ಆ.4ರಂದು ಬೆಂಗಳೂರಿಗೆ ವಾಪಸಾಗಿದ್ದರು. ಆ.5ರಂದು ಮನೆ ಸಮೀಪದ ಬೇಕರಿ ಬಳಿ ಸಿಗರೇಟ್ ಸೇದುವಾಗ ಬಾಲ್ಯ ಸ್ನೇಹಿತರಾದ ರೌಡಿ ಕಾರ್ತಿಕ್, ರಾಹುಲ್, ಪಾಂಡು, ಈಶ್ಚರ್ ಕಾರಿನಲ್ಲಿ ಬಂದು ಬಲವಂತವಾಗಿ ತಿಲಕ್‌ನನ್ನು ಕಾರಿನೊಳಗೆ ಎಳೆದು ಕೂರಿಸಿಕೊಂಡು ಜ್ಞಾನಭಾರತಿ ಕ್ಯಾಂಪಸ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು.

ಜೂಜಾಡಿ ಗೆದ್ದಿರುವ 25 ಲಕ್ಷ ರೂ. ಪೈಕಿ 10 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದರು. ತಿಲಕ್‌ನ ಮೊಬೈಲ್ ಕಸಿದುಕೊಂಡು ತಿಲಕ್ ಖಾತೆಯಿಂದ 15 ಲಕ್ಷ ರೂ. ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ನೆಲಮಂಗಲ ಸಮೀಪದ ಗೊಲ್ಲಹಳ್ಳಿಯಲ್ಲಿರುವ ಆರೋಪಿ ತರುಣ್‌ಗೌಡ ಕುಟುಂಬಕ್ಕೆ ಸೇರಿದ ರೆಸಾರ್ಟ್‌ಗೆ ತಿಲಕ್‌ನನ್ನು ಕರೆದೊಯ್ದು ರೂಮ್‌ನಲ್ಲಿ ಕೂಡಿ ಹಾಕಿದ್ದರು.

ಮಾರನೇ ದಿನ ‘ಜೂಜಾಟದಲ್ಲಿ ನಮಗೆ ಮೋಸ ಮಾಡಿ ಗೆದ್ದಿರುವ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದೇವೆ’ ಎಂದು ತಿಲಕ್‌ನಿಂದ ಬಲವಂತವಾಗಿ ವಿಡಿಯೊ ಮಾಡಿಸಿದ್ದರು.ಈ ಬಗ್ಗೆ ಪೊಲೀಸ್‌ಗೆ ದೂರು ನೀಡಿದ ಮೇರೆಗೆ ಹನುಮಂತನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಲ್ಯ ಸ್ನೇಹಿತನರು

ತಿಲಕ್ ಮಣಿಕಂಠ ಮತ್ತು ಆರೋಪಿಗಳಾದ ರೌಡಿ ಕಾರ್ತಿಕ್, ರಾಹುಲ್ ಬಾಲ್ಯ ಸ್ನೇಹಿತರು. ತಿಲಕ್ ಜೂಜಾಡಿ ಹಣ ಗೆದ್ದಿರುವ ವಿಚಾರ ತಿಳಿದು ಆರೋಪಿಗಳೊಂದಿಗೆ ಸೇರಿಕೊಂಡು ಸುಲಿಗೆಗೆ ಪ್ಲಾೃನ್ ಮಾಡಿದ್ದ. ಅಪಹರಿಸಿ ಹಣ ಸುಲಿಗೆ ಮಾಡಿದ್ದರು. ಜೂಜಾಟದಲ್ಲಿ ಗೆದ್ದಿರುವುದರಿಂದ ತಿಲಕ್ ಸುಲಿಗೆ ಬಗ್ಗೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಭಾವಿಸಿದ್ದರು.

ಯಶವಂತಪುರ-ಗೋವಾ-ಬಾಂಬೆ-ಶಿರಡಿ !

ಆ.6ರಂದು ತಿಲಕ್‌ಗೆ ಮೊಬೈಲ್ ವಾಪಾಸ್ ಕೊಟ್ಟು ಬಿಟ್ಟು ಕಳುಹಿಸಿದ ಆರೋಪಿಗಳು ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಗೋವಾಗೆ ರೈಲು ಹತ್ತಿದ್ದರು. ಗೋವಾದಲ್ಲಿ ಸ್ವಲ್ಪ ದಿನ ಕಾಲ ಕಳೆದು ಮುಂಬೈಗೆ ತೆರಳಿದ್ದರು. ಅಲ್ಲಿ ಕೆಲ ದಿನ ಸುತ್ತಾಡಿ ಶಿರಡಿಗೆ ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ವಿನೋದ್ ಭಟ್ ನೇತೃತ್ವದ ತಂಡ ಆರೋಪಿಗಳನ್ನು ಬೆನ್ನತ್ತಿ ಶಿರಡಿಯಲ್ಲಿ ಬಂಧಿಸಿದ್ದಾರೆ.