Survive in Space: ಬಾಹ್ಯಾಕಾಶವು ಮಾನವರಿಗೆ ಮಾತ್ರವಲ್ಲದೆ ಭೂಮಿಯ ಮೇಲಿರುವ ಹಲವು ಜೀವ ರಾಶಿಗಳಿಗೂ ಅತ್ಯಂತ ಅಪಾಯಕಾರಿ ವಾತಾವರಣವೇ ಸರಿ. ಗಾಳಿಯಿಲ್ಲದ ನಿರ್ವಾತ, ಆಮ್ಲಜನಕದ ಕೊರತೆ, ತೀವ್ರವಾದ ವಿಕಿರಣ (Radiation) ಮತ್ತು ಅಧಿಕ ತಾಪಮಾನ ಬದಲಾವಣೆಗಳು ಬಾಹ್ಯಾಕಾಶದಲ್ಲಿ ಬದುಕನ್ನು ಜಟಿಲ ಮಾಡಿಡುತ್ತದೆ. ಆದರೆ, ಭೂಮಿಯ ಮೇಲಿನ ಕೆಲವು ಜೀವಿಗಳು ಮಾತ್ರ ಇಂತಹ ಸವಾಲಿನ ಹಾಗೂ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಬದುಕುಳಿಯುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ ಎಂದರೆ ನಿಜಕ್ಕೂ ಅಚ್ಚರಿ ಪಡುವಂತ ಸಂಗತಿಯಾಗಿದೆ.
ಭೂಮಿ ಮೇಲಿನ ಆನೆ, ಹುಲಿ, ಚಿರತೆ, ಹಕ್ಕಿಗಳು ಸೇರಿದಂತೆ ಸಾಕಷ್ಟು ಜೀವರಾಶಿಗಳು ನಿಸರ್ಗದ ಒಂದಲ್ಲ, ಒಂದು ಸಂಪನ್ಮೂಲದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಹೀಗಿರುವಾಗ, ಇಂತಹ ಪ್ರಾಣಿಗಳು ಬಾಹ್ಯಾಕಾಶಗಳು ಸಾಧ್ಯವಾ? ಖಂಡಿತ ಇಲ್ಲ ಎಂಬ ಯೋಚನೆಯೇ ನಿಮ್ಮಲ್ಲಿ ಮೂಡಬಹುದು. ಆದ್ರೆ, ಇಲ್ಲಿ ಗಮನಿಸಬೇಕಾದ ವಿಷಯ ಏನಂದರೆ, ಕೆಲವು ನೈಜ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಪರೀಕ್ಷೆಗೆ ಒಳಪಟ್ಟ ಕೆಲವು ಜೀವಿಗಳು, ಬಾಹ್ಯಾಕಾಶದಂತಹ ಸವಾಲಿನ ಪರಿಸ್ಥಿತಿಗಳ ಪ್ರಯೋಗಗಳಲ್ಲಿ ತಮ್ಮ ಬದುಕುಳಿಯುವಿಕೆಯನ್ನು ಸಾಬೀತುಪಡಿಸಿ ತೋರಿಸಿರುವುದು ಈ ನಿರ್ಣಯಕ್ಕೆ ಒಂದು ಮುಖ್ಯ ಕಾರಣವಾಗಿದೆ.
ಟಾರ್ಡಿಗ್ರೇಡ್‌ಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಬದುಕಬಲ್ಲ ಹೆಸರಾಂತ ಸೂಕ್ಷ್ಮಜೀವಿಗಳಾಗಿವೆ. ಇವು ನೋಡಲು ಚಿಕ್ಕದಾಗಿದ್ದರೂ, 'ಕ್ರಿಪ್ಟೋಬಯೋಸಿಸ್' ಎಂಬ ವಿಶೇಷ ಸ್ಥಿತಿಗೆ ತಲುಪುವ ಸಾಮರ್ಥ್ಯ ಹೊಂದಿವೆ. ಈ ಸ್ಥಿತಿಯಲ್ಲಿ ಅವು ತಮ್ಮ ದೇಹದ ನೀರನ್ನೆಲ್ಲ ಕಳೆದುಕೊಂಡು ಜೀವವಿಲ್ಲದಂತೆ ಇರುತ್ತವೆ. ಇದರಿಂದಾಗಿ ತೀವ್ರ ಶೀತ, ಬರ ಹಾಗೂ ಅಪಾಯಕಾರಿ ವಿಕಿರಣಗಳನ್ನು (Radiation) ಸಹಿಸಿಕೊಂಡು ಬದುಕಲು ಇವುಗಳಿಗೆ ಸಾಧ್ಯವಾಗುತ್ತದೆ. 2007ರ ಬಾಹ್ಯಾಕಾಶ ಪ್ರಯೋಗವೊಂದರಲ್ಲಿ, ಇವುಗಳನ್ನು ಸ್ಪೇಸ್ನ ಕಠಿಣ ವಾತಾವರಣಕ್ಕೆ ಒಡ್ಡಲಾಗಿತ್ತು. ಆದರೆ, ಭೂಮಿಗೆ ಮರಳಿದ ಮೇಲೆಯೂ ಇವುಗಳು ಜೀವಂತವಾಗಿದ್ದು ಸಾಬೀತಾಯಿತು. ಹೀಗಾಗಿ, ಬಾಹ್ಯಾಕಾಶದಂತಹ ಕಠಿಣ ಪರಿಸರದಲ್ಲಿ ಈ ಜೀವಿಗಳು ಹೇಗೆ ಬದುಕಬಲ್ಲವು ಎಂಬುದನ್ನು ಅಂದಾಜಿಸಲಾಗಿದೆ.
ಜಿರಳೆಗಳು ಬದುಕುಳಿಯುವ ಸಾಮರ್ಥ್ಯಕ್ಕೆ ಹೆಸರುವಾಸಿ. ಬಾಹ್ಯಾಕಾಶ ಸಂಶೋಧನೆಯಲ್ಲಿ ಅವುಗಳ ಅಸಾಧಾರಣ ಸಾಮರ್ಥ್ಯವನ್ನು ಗುರುತಿಸಲಾಗಿದೆ. 2007ರಲ್ಲಿ, ರಷ್ಯಾದ ಫೋಟಾನ್-ಎಂ 3 ಕಾರ್ಯಾಚರಣೆಯಲ್ಲಿ ಜಿರಳೆ ಮೊಟ್ಟೆಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಕಾರ್ಯಾಚರಣೆಯ ಬಳಿಕ, ಮೊಟ್ಟೆಗಳು ಮರಿಯಾದವು ಎಂದು ವರದಿಯಾಗಿದೆ. ಇದು ಜಿರಳೆಗಳ ವಿಕಿರಣ ಮತ್ತು ಇತರ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ವಿಜ್ಞಾನಿಗಳು ಅಚ್ಚರಿ ವ್ಯಕ್ತಪಡಿಸಿದರು.
ಸಣ್ಣ ನೆಮಟೋಡ್‌ಗಳು ಅಥವಾ ದುಂಡಾಣು ಹುಳುಗಳು ಎಂದು ಕರೆಯಲ್ಪಡುವ ಈ ಜೀವಿಗಳು, ಮಾನವರು ಬಾಹ್ಯಾಕಾಶದಲ್ಲಿ ದೀರ್ಘಕಾಲೀನ ಬದುಕುಳಿಯುವಿಕೆಯನ್ನು ಅಧ್ಯಯನ ಮಾಡಲು ಸಹಾಯ ಮಾಡುವ ಪ್ರಮುಖ ಜೀವಿಗಳಾಗಿವೆ. ನಾಸಾದ ಕೊಲಂಬಿಯಾ ಬಾಹ್ಯಾಕಾಶ ಕಾರ್ಯಾಚರಣೆಯ ಪ್ರಯೋಗಗಳಲ್ಲಿ ಇವುಗಳನ್ನು ಬಳಸಲಾಯಿತು. ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯು ವಯಸ್ಸಾಗುವಿಕೆ ಮತ್ತು ಜೀನ್ ಕಾರ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ಅವುಗಳ ದೇಹಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ದುಂಡಾಣು ಹುಳುಗಳು ಅಂತಹ ಅಧ್ಯಯನಗಳಿಗೆ ವಿಶೇಷವಾಗಿ ಉಪಯುಕ್ತವಾಗಿವೆ ಏಕೆಂದರೆ ಅವು ಮಾನವನಂತೆ ಕೆಲವು ಜೈವಿಕ ಹೋಲಿಕೆಗಳನ್ನು ಹೊಂದಿವೆ.
ಸಣ್ಣ ಉಪ್ಪುನೀರಿನ ಸೀಗಡಿಗಳು (Brine Shrimp) ನೀರಿಲ್ಲದೆಯೂ ದೀರ್ಘಕಾಲ ಬದುಕಬಲ್ಲ, ಮೊಟ್ಟೆಗಳನ್ನು ಇಡುವ ಅದ್ಭುತ ಜೀವಿಗಳು. ಈ ಮೊಟ್ಟೆಗಳು ಒಣಗಿದಂತಿದ್ದರೂ, ಮತ್ತೆ ನೀರು ಸಿಕ್ಕಾಗ ಸಕ್ರಿಯಗೊಂಡು ಮರಿಗಳಾಗಿ ಹೊರಬರುತ್ತವೆ. ಇವುಗಳ ಈ ವಿಶೇಷ ಗುಣದಿಂದಾಗಿ, ಇವುಗಳ ಮೊಟ್ಟೆಯನ್ನು ಬಾಹ್ಯಾಕಾಶ ಸಂಶೋಧನೆಯಲ್ಲಿ ಬಳಸಲಾಗಿದೆ. ಕಠಿಣ ವಾತಾವರಣದಲ್ಲೂ ಜೀವಿಗಳ ಬೀಜಗಳು ಹೇಗೆ ಬದುಕಿರುತ್ತವೆ ಮತ್ತು ಭವಿಷ್ಯದ ಬಾಹ್ಯಾಕಾಶ ಪಯಣದಲ್ಲಿ ಇವುಗಳನ್ನು ಜೀವಾಧಾರಕ ವ್ಯವಸ್ಥೆಯಾಗಿ (Life Support System) ಹೇಗೆ ಬಳಸಬಹುದು ಎಂದು ತಿಳಿಯಲು ಈ ಸೀಗಡಿಗಳು ಸಹಾಯ ಮಾಡುತ್ತವೆ ಎನ್ನಲಾಗಿದೆ.
ಹಣ್ಣಿನ ನೊಣಗಳು (Drosophila) ಬಾಹ್ಯಾಕಾಶ ಸಂಶೋಧನೆಯ ಆರಂಭಿಕ ದಿನಗಳಿಂದಲೂ ವಿಜ್ಞಾನಿಗಳಿಗೆ ಪ್ರಮುಖ ಸಹಾಯಕವಾಗಿವೆ. 1947ರಲ್ಲಿ ಅಮೆರಿಕವು ಪ್ರಾಯೋಗಿಕ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿದ ಮೊಟ್ಟಮೊದಲ ಜೀವಿಗಳಲ್ಲಿ ಇವೂ ಸೇರಿದ್ದವು ಎಂಬುದು ಗಮನಾರ್ಹ. ಇವು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಇವುಗಳ ತಳಿಶಾಸ್ತ್ರೀಯ (Genetic) ಅಧ್ಯಯನ ಸುಲಭವಾಗಿರುವುದರಿಂದ ಸಂಶೋಧನೆಗೆ ಸೂಕ್ತವಾಗಿವೆ. ಬಾಹ್ಯಾಕಾಶದ ವಿಕಿರಣ ಮತ್ತು ಶೂನ್ಯ ಗುರುತ್ವಾಕರ್ಷಣೆಯು ಜೀನ್‌ಗಳು ಹಾಗೂ ದೇಹದ ಬೆಳವಣಿಗೆಯ ಮೇಲೆ ಬೀರುವ ಪರಿಣಾಮಗಳನ್ನು ತಿಳಿಯಲು ಈ ನೊಣಗಳನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲಾಗಿದೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ಅತ್ಯಂತ ಹೆಚ್ಚಾಗಿ ಅಧ್ಯಯನಕ್ಕೊಳಪಟ್ಟ ಸಸ್ತನಿಗಳಲ್ಲಿ ಇಲಿಗಳೂ ಒಂದು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಇಲಿಗಳನ್ನು ಬಳಸಿ ಹಲವು ಪ್ರಯೋಗಗಳನ್ನು ನಡೆಸಲಾಗಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಮೂಳೆ ಸವತೆ, ಸ್ನಾಯುಗಳ ದೌರ್ಬಲ್ಯ ಮತ್ತು ದೇಹದ ಮೇಲಾಗುವ ಒತ್ತಡವನ್ನು ತಿಳಿಯಲು ಇವುಗಳನ್ನು ಪ್ರಮುಖವಾಗಿ ಬಳಸಲಾಗಿದೆ. ಬಾಹ್ಯಾಕಾಶ ಪಯಣದಲ್ಲಿ ಮಾನವ ದೇಹದಲ್ಲೂ ಇಂತಹುದೇ ಬದಲಾವಣೆಗಳು ಆಗುವುದರಿಂದ, ಭವಿಷ್ಯದ ದೀರ್ಘಕಾಲೀನ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಗಳಿಗೆ ಇಲಿಗಳ ಮೇಲಿನ ಈ ಸಂಶೋಧನೆ ಬಹಳ ಮುಖ್ಯ ಎನ್ನಲಾಗಿದೆ.
ಶಿಲೀಂಧ್ರಗಳು (Fungi) ಪ್ರಾಣಿಗಳಲ್ಲದಿದ್ದರೂ, ಬಾಹ್ಯಾಕಾಶದಲ್ಲಿ ಬದುಕಬಲ್ಲ ಇವುಗಳ ಸಾಮರ್ಥ್ಯವು ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅತ್ಯಂತ ಅಪಾಯಕಾರಿ ವಿಕಿರಣಗಳಿರುವ (Radiation) ವಾತಾವರಣದಲ್ಲೂ ಕೆಲವು ಪ್ರಭೇದದ ಶಿಲೀಂಧ್ರಗಳು ಸುಲಭವಾಗಿ ಬದುಕಬಲ್ಲವು ಎಂದು ಪ್ರಯೋಗಗಳಿಂದ ತಿಳಿದುಬಂದಿದೆ. ವಿಶೇಷವಾಗಿ, ಕ್ಲಾಡೋಸ್ಪೋರಿಯಮ್ ಸ್ಫೇರೋಸ್ಪರ್ಮಮ್ ಎನ್ನುವ ಶಿಲೀಂಧ್ರವು ಬಾಹ್ಯಾಕಾಶದ ವಿಕಿರಣಗಳನ್ನು ತಡೆದುಕೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿದೆ. ಭವಿಷ್ಯದಲ್ಲಿ ಗಗನಯಾತ್ರಿಗಳನ್ನು ವಿಕಿರಣಗಳಿಂದ ರಕ್ಷಿಸಲು ಈ ಶಿಲೀಂಧ್ರಗಳನ್ನು ಕವಚವಾಗಿ ಅಥವಾ ಜೈವಿಕ ವಸ್ತುವಾಗಿ ಬಳಸಬಹುದೇ ಎಂಬ ಬಗ್ಗೆ ಸಂಶೋಧನೆಗಳೂ ತೆರೆಮರೆಯಲ್ಲಿ ನಡೆಯುತ್ತಿವೆ.
ಜೀಬ್ರಾಫಿಶ್ ಚಿಕ್ಕ ಮೀನುಗಳಾಗಿದ್ದರೂ, ಬಾಹ್ಯಾಕಾಶ ಸಂಶೋಧನೆಯಲ್ಲಿ ಇವುಗಳ ಪಾತ್ರ ದೊಡ್ಡದಿದೆ. ಇವು ಮಾನವನಿಗೆ ಹೋಲುವ ತಳಿಶಾಸ್ತ್ರೀಯ (Genetic) ಗುಣಗಳನ್ನು ಹೊಂದಿದ್ದು, ಪಾರದರ್ಶಕವಾದ ಭ್ರೂಣಗಳನ್ನು ಹೊರುವುದರಿಂದ ದೇಹದ ಬೆಳವಣಿಗೆಯನ್ನು ಅಧ್ಯಯನ ಮಾಡುವುದು ಸುಲಭ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಭ್ರೂಣದ ಬೆಳವಣಿಗೆ, ಹೃದಯ ಹಾಗೂ ಮೂಳೆಗಳ ಬದಲಾವಣೆ ಮತ್ತು ನರಮಂಡಲದ ಕಾರ್ಯವೈಖರಿಯನ್ನು ತಿಳಿಯಲು ಜೀಬ್ರಾಫಿಶ್‌ಗಳನ್ನು ಬಳಸಲಾಗುತ್ತದೆ.
ಮೇಲ್ಕಂಡ ಜೀವಿಗಳು ಮಾನವರಂತೆ ಬಾಹ್ಯಾಕಾಶದಲ್ಲಿ ನೇರವಾಗಿ ವಾಸಿಸುವುದಿಲ್ಲ. ಟಾರ್ಡಿಗ್ರೇಡ್‌ಗಳಂತಹ ಜೀವಿಗಳು ಕಠಿಣ ಪರಿಸರದಲ್ಲೂ ನೇರವಾಗಿ ಬದುಕಿದರೆ, ಇನ್ನು ಕೆಲವನ್ನು ಶೂನ್ಯ ಗುರುತ್ವಾಕರ್ಷಣೆ ಮತ್ತು ವಿಕಿರಣಗಳಿರುವ ವಾತಾವರಣದಲ್ಲಿ ಪರೀಕ್ಷೆಗೆ ಒಳಪಡಿಸಿ, ಅಧ್ಯಯನ ಮಾಡಲಾಗಿದೆ. ಭೂಮಿಗಿಂತ ಸಂಪೂರ್ಣ ಭಿನ್ನವಾದ ಸ್ಥಿತಿಯಲ್ಲೂ ಜೀವ ಹೇಗೆ ಉಳಿಯಬಲ್ಲದು ಎನ್ನುವ ಮಹತ್ವದ ಪ್ರಶ್ನೆಗೆ ಇವು ಮೊದಲ ಹಂತದ ಉತ್ತರವಾಗಿದೆ. ಟಾರ್ಡಿಗ್ರೇಡ್‌ನಿಂದ ಹಿಡಿದು ಮೀನು, ಇಲಿಗಳವರೆಗಿನ ಈ ಅಧ್ಯಯನಗಳು ಭವಿಷ್ಯದ ಮಂಗಳ ಗ್ರಹದ ಪಯಣ, ದೀರ್ಘಕಾಲದ ಬಾಹ್ಯಾಕಾಶ ಯಾನ ಹಾಗೂ ಅನ್ಯಗ್ರಹಗಳಲ್ಲಿ ಜೀವದ ಸಾಧ್ಯತೆಯನ್ನು ಗ್ರಹಿಸಲು ವಿಜ್ಞಾನಿಗಳಿಗೆ ನೆರವಾಗುತ್ತಿವೆ ಎಂಬುದು ಹುಬ್ಬೇರಿಸುವ ಸಂಗತಿಗಳು,(ಏಜೆನ್ಸೀಸ್).