ಬೆಳಗಾವಿ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ 2020ರಿಂದ 2021ರ ಅಕ್ಟೋಬರ್ ಅಂತ್ಯದವರೆಗೆ ದಾಖಲಾಗಿರುವ 206 ಪ್ರಕರಣ ಭೇದಿಸಿ, ಜಪ್ತಿ ಮಾಡಿಕೊಳ್ಳಲಾದ ನಗದು, ಚಿನ್ನಾಭರಣ ಹಾಗೂ ವಾಹನ ಸೇರಿ 8.58 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಜಪ್ತಿ ಮಾಡಿಕೊಂಡ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 2020ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳ ಪೈಕಿ ಶೇ.58 ಹಾಗೂ ಈವರ್ಷ 2021ರಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಶೇ.30 ಪ್ರಕರಣಗಳ ಸ್ವತ್ತುಗಳನ್ನು ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ಹಿಂತಿರುಗಿಸಲು ಕ್ರಮ ವಹಿಸಲಾಗಿದೆ ಎಂದರು.
2020ರಲ್ಲಿ 1.05 ಕೋಟಿ ರೂ.ಮೌಲ್ಯದ 2 ಕೆಜಿ 336 ಗ್ರಾಂ ಚಿನ್ನ, 7.74 ಲಕ್ಷ ರೂ.ಮೌಲ್ಯದ 17 ಕೆಜಿ 881 ಗ್ರಾಂ ಬೆಳ್ಳಿ, 2021ರಲ್ಲಿ 27.25 ಲಕ್ಷ ರೂ.ಮೌಲ್ಯದ 702.24 ಗ್ರಾಂ ಚಿನ್ನಾಭರಣ ಮತ್ತು 52,900 ರೂ.ಮೌಲ್ಯದ 1 ಕೆಜಿ 275 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 47.35 ಲಕ್ಷ ರೂ.ಮೌಲ್ಯದ 168 ದ್ವಿಚಕ್ರ ವಾಹನಗಳು, 22 ಕಾರುಗಳು ಹಾಗೂ 32 ಮೊಬೈಲ್ ಫೋನ್ ಕಳವು ಪ್ರಕರಣ ಭೇದಿಸಲಾಗಿದೆ. ಜತೆಗೆ ಸಿಇಎಸ್ ಅಪರಾಧ ಠಾಣೆಯಿಂದ 2020ರಲ್ಲಿ 10.97 ಲಕ್ಷ ರೂ.ವಶಕ್ಕೆ ಪಡೆದು ವಾರಸುದಾರರಿಗೆ ವಿತರಿಸಲಾಗುತ್ತಿದೆ ಎಂದರು.
2020ರಲ್ಲಿ 1.10 ಕೋಟಿ ರೂ. ಹಾಗೂ 2021ರಲ್ಲಿ 10,06,850 ರೂ.ಕಳವು ಆಗಿತ್ತು. ಎಲ್ಲವನ್ನೂ ಕಳ್ಳರಿಂದ ಜಪ್ತಿ ಮಾಡಲಾಗಿದೆ. ಜಾನುವಾರು, ಅರಿಶಿಣ, ಧಾನ್ಯ, ಟೈಯರ್ ಸೇರಿ 1.18 ಕೋಟಿ ರೂ.ಮೌಲ್ಯದ ವಸ್ತು ಜಪ್ತಿ ಮಾಡಲಾಗಿದ್ದು, ಈ 206 ಪ್ರಕರಣಗಳ ಪೈಕಿ ಚಿಕ್ಕೋಡಿ, ಅಥಣಿ, ಮುರಗೋಡ, ಮೂಡಲಗಿ, ಕಾಗವಾಡ, ಗೋಕಾಕ, ಅಂಕಲಿ, ಘಟಪ್ರಭಾ ಪೊಲೀಸ್ ಠಾಣೆಗಳ ಸಿಬ್ಬಂದಿಯೇ ಹೆಚ್ಚಿನ ಪ್ರಕರಣಗಳನ್ನು ಭೇದಿಸಿದ್ದಾರೆ.
ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳಿಗೆ ಇಲಾಖೆಯ ನಿಯಮಾನುಸಾರ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸೇರಿ ವಿವಿಧ ಠಾಣಾಧಿಕಾರಿಗಳು ಇದ್ದರು.