ರಾಷ್ಟ್ರೀಯ ಈಜು: ರುಜುಲಾ ಕೂಟ ದಾಖಲೆ, ರಾಜ್ಯಕ್ಕೆ ಮತ್ತೆ 4 ಚಿನ್ನದ ಪದಕ
ಬೆಂಗಳೂರು: ಕರ್ನಾಟಕದ ರುಜುಲಾ ಎಸ್. ಅಹಮದಾಬಾದ್ನಲ್ಲಿ ನಡೆಯುತ್ತಿರುವ 79ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ (Senior national championship) ನೂತನ ಕೂಟ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಕರ್ನಾಟಕದ ಈಜುಪಟುಗಳು ಕೂಟದ 5ನೇ ದಿನವಾದ ಶನಿವಾರ 4 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಸಹಿತ ಒಟ್ಟು 8 ಪದಕ ಗೆದ್ದುಕೊಂಡರು. ಕರ್ನಾಟಕ ತಂಡ ಈಗ 17 ಚಿನ್ನ, 13 ಬೆಳ್ಳಿ, 8 ಕಂಚಿನ ಸಹಿತ ಒಟ್ಟು 38 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾನುವಾರ ಕೂಟದ ಅಂತಿಮ ದಿನವಾಗಿದ್ದು, ರಾಜ್ಯಕ್ಕೆ ಸಮಗ್ರ ಚಾಂಪಿಯನ್ ಪಟ್ಟ ಒಲಿಯುವುದು ಬಹುತೇಕ ಖಾತ್ರಿಯಾಗಿದೆ.
ರುಜುಲಾ ಮಹಿಳೆಯರ 50 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ 26.23 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಕಳೆದ ವರ್ಷ ಭುವನೇಶ್ವರದಲ್ಲಿ ತಾನೇ ನಿರ್ಮಿಸಿದ್ದ ಕೂಟ ದಾಖಲೆಯನ್ನು (26.36 ಸೆ) ಸುಧಾರಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ರಾಜ್ಯದ ಚರಿತಾ ಪಿ. (26.53ಸೆ) ಬೆಳ್ಳಿ ಪದಕ ಗೆದ್ದುಕೊಂಡರು.
ರಾಜ್ಯದ ಮಣಿಕಂಠ ಎಲ್. ಪುರುಷರ 200 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ 2 ನಿಮಿಷ, 19.45 ಸೆಕೆಂಡ್ಗಳಲ್ಲಿ ಈಜಿ ಚಿನ್ನ ಗೆದ್ದರೆ, ಸೂರ್ಯ ಜೋಯಪ್ಪ (2ನಿ, 22.31ಸೆ) ಕಂಚು ಒಲಿಸಿಕೊಂಡರು.
ಪುರುಷರ 4/100 ಮೀ. ಫ್ರೀಸ್ಟೈಲ್ನಲ್ಲಿ ಕರ್ನಾಟಕ ತಂಡ 3 ನಿಮಿಷ, 24.15 ಸೆಕೆಂಡ್ಗಳಲ್ಲಿ ಈಜುವ ಮೂಲಕ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ಮಹಿಳೆಯರ 4/200 ಮೀ. ಫ್ರೀಸ್ಟೈಲ್ನಲ್ಲೂ ರಾಜ್ಯ ತಂಡ 8 ನಿಮಿಷ, 42.48 ಸೆಕೆಂಡ್ಗಳಲ್ಲಿ ಈಜಿ ಕೂಟ ದಾಖಲೆಯೊಂದಿಗೆ ಚಿನ್ನ ಒಲಿಸಿಕೊಂಡಿತು.
ರಾಜ್ಯದ ದರ್ಶನ್ ಎಸ್. ಪುರುಷರ 800 ಮೀ. ಫ್ರೀಸ್ಟೈಲ್ ಮತ್ತು ತಾನ್ಯಾ ಷಡಾಕ್ಷರಿ ಮಹಿಳೆಯರ 200 ಮೀ. ಬ್ರೆಸ್ಟ್ಸ್ಟ್ರೊಕ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.