ರಾಷ್ಟ್ರೀಯ ಈಜು: ತನಿಷಿ, ತಾನ್ಯಾ ದಾಖಲೆ; ಕರ್ನಾಟಕಕ್ಕೆ ಮತ್ತೆ 3 ಚಿನ್ನದ ಪದಕ  
ನ್ಯೂಸ್

ರಾಷ್ಟ್ರೀಯ ಈಜು: ತನಿಷಿ, ತಾನ್ಯಾ ದಾಖಲೆ; ಕರ್ನಾಟಕಕ್ಕೆ ಮತ್ತೆ 3 ಚಿನ್ನದ ಪದಕ

ಬೆಂಗಳೂರು: ಕರ್ನಾಟಕದ ತನಿಷಿ ಗುಪ್ತಾ ಮತ್ತು ತಾನ್ಯಾ ಷಡಾಕ್ಷರಿ ಅವರು ಅಹಮದಾಬಾದ್​ನಲ್ಲಿ ನಡೆಯುತ್ತಿರುವ 79ನೇ ಸೀನಿಯರ್​ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನಲ್ಲಿ (Senior National Aquatic Championship) ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡ ಕೂಟದ 4ನೇ ದಿನವಾದ ಶುಕ್ರವಾರ ಮತ್ತೆ 3 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದುಕೊಂಡಿದೆ. ಕರ್ನಾಟಕ ಈಗ ಒಟ್ಟು 30 ಪದಕಗಳೊಂದಿಗೆ (13 ಚಿನ್ನ, 10 ಬೆಳ್ಳಿ, 7 ಕಂಚು) ಪದಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.
ತನಿಷಿ ಗುಪ್ತಾ ಮಹಿಳೆಯರ 100 ಮೀ. ಬಟರ್​ಫ್ಲೈ ವಿಭಾಗದಲ್ಲಿ 1 ನಿಮಿಷ, 0.07ಸೆಕೆಂಡ್​ಗಳಲ್ಲಿ ಈಜಿ ನೂತನ ಕೂಟ ದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬಳಿಕ 100 ಮೀ. ಬ್ಯಾಕ್​ಸ್ಟೋಕ್​ನಲ್ಲಿ ತನಿಷಿ ಬೆಳ್ಳಿ ಗೆದ್ದರೆ, ರಾಜ್ಯದ ಇನ್ನೋರ್ವ ಈಜುಪಟು ನೀನಾ ವೆಂಕಟೇಶ್​ ಕಂಚು ಜಯಿಸಿದರು.

ತಾನ್ಯಾ ಷಡಾಕ್ಷರಿ ಮಹಿಳೆಯರ 400 ಮೀ. ಮೆಡ್ಲೆಯಲ್ಲಿ 4 ನಿಮಿಷ, 56.78 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ, 2018ರಲ್ಲಿ ರಿಚಾ ಮಿಶ್ರಾ (4ನಿ,59.17ಸೆ) ನಿರ್ಮಿಸಿದ್ದ ದಾಖಲೆ ಮುರಿಯುವ ಮೂಲಕ ಚಿನ್ನ ಒಲಿಸಿಕೊಂಡರು.

ಅನೀಶ್​ ಎಸ್​. ಗೌಡ ಪುರುಷರ 200 ಮೀ. ಫ್ರೀಸ್ಟೈಲ್​​ನಲ್ಲಿ ಚಿನ್ನ ಗೆದ್ದರೆ, ದರ್ಶನ್​ ಎಸ್​. ಬೆಳ್ಳಿ ಗಳಿಸಿದರು. ಎಸ್​. ಲಕ್ಷ್ಯ ಮಹಿಳೆಯರ 100 ಮೀ. ಬ್ರೆಸ್ಟ್​ಸ್ಟ್ರೊಕ್​ನಲ್ಲಿ ಬೆಳ್ಳಿ ಜಯಿಸಿದರು. ಮಿಶ್ರ 4/100 ಮೀ. ಮೆಡ್ಲೆ ರಿಲೇಯಲ್ಲಿ ರಾಜ್ಯ ತಂಡ ಬೆಳ್ಳಿ ಪದಕ ಒಲಿಸಿಕೊಂಡಿತು.