ನ್ಯೂಸ್

78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ; ದೇಶ ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿ: ಪ್ರಧಾನಿ ಮೋದಿ

ಮೋಹನ್​ ಶೆಟ್ಟಿ

ನವದೆಹಲಿ: ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, 11ನೇ ಬಾರಿಗೆ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮತ್ತು ಹೋರಾಡಿದ ಅಸಂಖ್ಯಾತ ಜನರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ ಎಂದರು.

ಕೆಂಪು ಕೋಟೆಯ ಆವರಣದಲ್ಲಿ 11ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತೊಡಗಿದ ಪ್ರಧಾನಿ ಮೋದಿ, "ವಿಕಸಿತ ಭಾರತ 140 ಕೋಟಿ ಜನರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬವಾಗಿದೆ. 'ನಮ್ಮ ಸಂಕಲ್ಪ'ದೊಂದಿಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಜನರು ಸಮರ್ಥರಾಗಿದ್ದಾರೆ" ಎಂದು ತಿಳಿಸಿದರು.

"ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ದೇಶ ಋಣಿಯಾಗಿದೆ. ಸ್ವಾತಂತ್ರ್ಯ ಪಡೆಯಲು ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು 40 ಕೋಟಿ ಜನರು ಮುಂದಾಗಿದ್ದರು ಎಂದರೆ ಇನ್ನೂ 140 ಕೋಟಿ ಜನರ ಸಂಕಲ್ಪದಿಂದ ನಾವು ಏನನ್ನು ಸಾಧಿಸಬಹುದು ಎಂದು ಊಹಿಸಿ" ಎಂದು ಪ್ರಧಾನಿ ನುಡಿದರು.