ನ್ಯೂಸ್

77ನೇ ಸ್ವಾತಂತ್ರ್ಯ ದಿನಾಚರಣೆಗೆ ವೇದಿಕೆ ಸಜ್ಜು; ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ

ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಿಂದ ಸಂಭ್ರಮಾಚರಣೆಯ ನೇತೃತ್ವ ವಹಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2023 ಆಗಸ್ಟ್ 15ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ. ಅವರು ರಾಷ್ಟ್ರಧ್ವಜಾರೋಹಣವನ್ನು ಮಾಡಲಿದ್ದಾರೆ ಮತ್ತು ಐತಿಹಾಸಿಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

77 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಕೆಂಪು ಕೋಟೆಯಲ್ಲಿನ ಆಚರಣೆಯ ಭಾಗವಾಗಲು ದೇಶದಾದ್ಯಂತ ವಿವಿಧ ವೃತ್ತಿಗಳ ಸುಮಾರು 1,800 ಜನರನ್ನು, ಅವರ ಕುಟುಂಬದೊಂದಿಗೆ, ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಸರ್ಕಾರದ ʼಜನ ಭಾಗೀದಾರಿʼದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.

ವಿಶೇಷ ಅತಿಥಿಗಳು: 660 ಕ್ಕೂ ಹೆಚ್ಚು ವಿವಿಧ ಗ್ರಾಮಗಳ 400 ಕ್ಕೂ ಹೆಚ್ಚು ಸರಪಂಚರನ್ನು ಒಳಗೊಂಡಿರುತ್ತಾರೆ. ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ತಲಾ 50. ಹೊಸ ಸಂಸತ್ತಿನ ಕಟ್ಟಡ ಸೇರಿದಂತೆ ಕೇಂದ್ರ ವಿಸ್ಟಾ ಯೋಜನೆಯ 50 ಶ್ರಮ ಯೋಗಿಗಳು (ನಿರ್ಮಾಣ ಕೆಲಸಗಾರರು). ಖಾದಿ ಕಾರ್ಮಿಕರು, ಗಡಿ ರಸ್ತೆಗಳ ನಿರ್ಮಾಣ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯ ತಲಾ 50 ಮತ್ತು ತಲಾ 50 ಪ್ರಾಥಮಿಕ ಶಾಲಾ ಶಿಕ್ಷಕರು, ದಾದಿಯರು ಮತ್ತು ಮೀನುಗಾರರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ವಿಶೇಷ ಅತಿಥಿಗಳಲ್ಲಿ ಕೆಲವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ಮತ್ತು ದೆಹಲಿಯಲ್ಲಿ ತಮ್ಮ ವಾಸ್ತವ್ಯದ ಭಾಗವಾಗಿ ರಕ್ಷಣಾ ರಾಜ್ಯ ಮಂತ್ರಿ ಶ್ರೀ ಅಜಯ್ ಭಟ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಎಪ್ಪತ್ತೈದು ದಂಪತಿಗಳನ್ನು ಅವರ ಸಾಂಪ್ರದಾಯಿಕ ಉಡುಗೆಯಲ್ಲಿ, ಕೆಂಪು ಕೋಟೆಯಲ್ಲಿ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.

2021 ಮಾರ್ಚ್ 12ರಂದು ಗುಜರಾತ್​​ನ ಅಹಮದಾಬಾದ್‌ ನಲ್ಲಿರುವ ಸಬರಮತಿ ಆಶ್ರಮದಿಂದ ಪ್ರಧಾನ ಮಂತ್ರಿಯವರು ಪ್ರಾರಂಭಿಸಿದ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆಯು ಈ ವರ್ಷದ ಸ್ವಾತಂತ್ರ್ಯ ದಿನದಂದು ಮುಕ್ತಾಯಗೊಳ್ಳುತ್ತದೆ ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಶ್ರೀ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ನವ ಚೈತನ್ಯದೊಂದಿಗೆ ದೇಶವನ್ನು ‘ಅಮೃತ ಕಾಲ’ಕ್ಕೆ ಕರೆದೊಯ್ಯುತ್ತದೆ.