ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೂರು ದಿನಗಳ ಕಾಲ ಅಬ್ಬರಿಸಿದ ಮಾನ್ಸೂನ್ ಮಳೆಗೆ ಮೃತಪಟ್ಟವರ ಸಂಖ್ಯೆ ಗುರುವಾರ 74ಕ್ಕೆ ಏರಿದೆ. ರಕ್ಷಣಾ ಸಿಬ್ಬಂದಿ ಶಿಮ್ಲಾದ ಶಿವ ದೇವಾಲಯದ ಅವಶೇಷಗಳಿಂದ ಮತ್ತೊಂದು ದೇಹವನ್ನು ಹೊರತೆಗೆದರೆ, ಚಂಬಾದಲ್ಲಿ ಇನ್ನೂ ಇಬ್ಬರು ಮೃತಪಟ್ಟಿದ್ದಾರೆ.
ಸಮ್ಮರ್ ಹಿಲ್‌ನಲ್ಲಿರುವ ಶಿವ ದೇವಾಲಯದಲ್ಲಿ ಸಂಭವಿಸಿದ ಭೂಕುಸಿತ ಸೇರಿದಂತೆ ಶಿಮ್ಲಾದಲ್ಲಿ ಘಟಿಸಿದ ಮೂರು ಪ್ರಮುಖ ಭೂಕುಸಿತಗಳಲ್ಲಿ 21 ಜನರು ಸಾವಿಗೀಡಾಗಿದ್ದಾರೆ. ಕಳೆದ 55 ದಿನಗಳಲ್ಲಿ 113 ಭೂಕುಸಿತಗಳನ್ನು ಹಿಮಾಚಲ ಪ್ರದೇಶ ಎದುರಿಸಿದೆ. ಮಾನ್ಸೂನ್ ಅಬ್ಬರದಿಂದಾಗಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) 2,491 ಕೋಟಿ ರೂಪಾಯಿ ಕಳೆದುಕೊಂಡಿದ್ದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ಕ್ಕೆ 1000 ಕೋಟಿ ರೂಪಾಯಿ ನಷ್ಟವಾಗಿದೆ. ಶಿಮ್ಲಾದ ಸಮ್ಮರ್ ಹಿಲ್ನಲ್ಲಿ ಭೂಕುಸಿತದಿಂದ ರೈಲ್ವೆ ಹಳಿಗಳ ಒಂದು ಭಾಗ ಕೊಚ್ಚಿ ಹೋಗಿದ್ದು, ಹಳಿಗಳು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಮಾತನಾಡಿ, ಇತ್ತೀಚಿನ ಭೂಕುಸಿತದಿಂದ ಹಾನಿಗೊಳಗಾದ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡುವುದು "ಪರ್ವತದಂತಹ ಸವಾಲು" ಎಂದು ಹೇಳಿದರು.
ಪರಿಸರ ದುರ್ಬಲವಾದ ಹಿಮಾಲಯದಲ್ಲಿ ಅವೈಜ್ಞಾನಿಕ ನಿರ್ಮಾಣಗಳು, ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶ ಮತ್ತು ನೀರಿನ ಹರಿವನ್ನು ತಡೆಯುವ ತೊರೆಗಳ ಬಳಿಯ ನಿರ್ಮಾಣಗಳಿಂದ ಆಗಾಗ್ಗೆ ಭೂಕುಸಿತಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಭಾರತೀಯ ಹವಾಮಾನ ಇಲಾಖೆ (IMD)ಯು ಶಿಮ್ಲಾ, ಸೋಲನ್, ಮಂಡಿ, ಚಂಬಾ ಪ್ರದೇಶಗಳಲ್ಲಿ ಭಾರೀ ಮಳೆಯೊಂದಿಗೆ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ರಾಜ್ಯದಲ್ಲಿ ಕಳೆದ ಭಾನುವಾರದಿಂದ ಆರಂಭವಾದ ಮಳೆ ಸತತ ಮೂರು ದಿನಗಳ ಕಾಲ ಅಬ್ಬರಿಸಿದ್ದು, ಮಂಗಳವಾರದ ನಂತರ ಮಳೆ ಕಡಿಮೆಯಾಗಿದ್ದು, ಗುರುವಾರ ಕೆಲವೆಡೆ ತುಂತುರು ಮಳೆಯಾಗಿದೆ.
ಜೂನ್ 24ಕ್ಕೆ ಮಾನ್ಸೂನ್ ರಾಜ್ಯಕ್ಕೆ ಎಂಟ್ರಿಯಾದಾಗಿನಿಂದ ಇಲ್ಲಿಯವರೆಗೂ 217 ಮಂದಿ ಮಳೆ ಸಂಬಂಧಿತ ಘಟನೆಗಳಿಂದ ಸಾವಿಗೀಡಾಗಿದ್ದಾರೆ. ರಣಭೀಕರ ಮಳೆಯು ರಾಜ್ಯದಲ್ಲಿ ಮೂಲಸೌಕರ್ಯಗಳನ್ನು ನಾಶಪಡಿಸಿದೆ. ಇಷ್ಟೇ ಅಲ್ಲದೆ, ಕೆಲ ಕುಟುಂಬಗಳ ಮೂಲವನ್ನೇ ಅಳಿಸಿದೆ. ಶಿಮ್ಲಾ ದೇವಸ್ಥಾನದ ಬಳಿಕ ಸಂಭವಿಸಿದ ಭೂಕುಸಿತದಲ್ಲಿ ಮೂರು ತಲೆಮಾರುಗಳ ಏಳು ಜನರ ಕುಟುಂಬವು ಸಂಪೂರ್ಣ ನಾಶವಾಯಿತು. ಅಧಿಕಾರಿಗಳ ಪ್ರಕಾರ, ಮೂವರು ಮಕ್ಕಳು ಸೇರಿದಂತೆ ಕುಟುಂಬದ ಏಳು ಸದಸ್ಯರು ದೇವಸ್ಥಾನದ ಒಳಗಿರುವಾಗಲೇ ಶಿವನ ದೇವಾಲಯ ಕುಸಿದಿದೆ.
ನನ್ನ ಸಹೋದರ, ಆತನ ಮೂವರು ಮಕ್ಕಳು, ನಾದಿನಿ ಹಾಗೂ ನನ್ನ ಮಗಳು ಸೇರಿದಂತೆ ಐದು ಮಂದಿ ದೇವಸ್ಥಾನದ ಒಳಗಿದ್ದರು. ರಕ್ಷಣಾ ಸಿಬ್ಬಂದಿ ಶವಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಕನಿಷ್ಠ ಅವರ ಅಂತಿಮ ಸಂಸ್ಕಾರವನ್ನಾದರೂ ಮಾಡಲು ನಾನು ಬಯಸುತ್ತೇನೆ, ನಾನು ಹೋಗುವ ಸಮಯ ಬರುವ ಮೊದಲು ನನ್ನ ಸಹೋದರನ ಅಂತಿಮ ಸಂಸ್ಕಾರವನ್ನೂ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಘಟನೆಯಲ್ಲಿ ಮೃತಪಟ್ಟ ಕುಟುಂಬದ ಪುರುಷರಲ್ಲಿ ಒಬ್ಬರಾದ ಪವನ್ ಅವರ ಸಹೋದರ ವಿನೋದ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಾವಿರಾರು ಜನರ ಜೀವನೋಪಾಯವು ಮಾನ್ಸೂನ್ ಮಳೆಯ ಆರ್ಭಟದಿಂದಾಗಿ ರಾಜ್ಯದಲ್ಲಿ ತೀವ್ರವಾಗಿ ಹಾನಿಯಾಗಿದೆ. ಹಿಮಾಚಲ ಪ್ರದೇಶದಾದ್ಯಂತ ಅಂದಾಜು 10,000 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ನಿಜವಾದ ವೆಚ್ಚ ಇದಕ್ಕಿಂತಲೂ ಜಾಸ್ತಿ ಇದೆ ಎನ್ನಲಾಗಿದೆ. ರಾಜ್ಯದ ಆರ್ಥಿಕತೆಯ ಪ್ರಮುಖ ಶಕ್ತಿಯಾಗಿರುವ ಪ್ರವಾಸೋದ್ಯಮ ಮತ್ತು ಸೇಬು ವ್ಯಾಪಾರದ ಮೇಲೆ ಮಳೆ ಹೆಚ್ಚು ಪರಿಣಾಮ ಬೀರಿದೆ. ದಿನಕ್ಕೆ 2,000 ಗಳಿಸುತ್ತಿದ್ದ ಟ್ಯಾಕ್ಸಿ ಚಾಲಕರು ಈಗ 200 ರೂಪಾಯಿಗಿಂತ ಕಡಿಮೆ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ಶೇ. 50-60% ಜನವಸತಿ ಹೊಂದಿರುವ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳು ಇದು ಕೇವಲ 5% ಕ್ಕೆ ಇಳಿದಿದೆ. (ಏಜೆನ್ಸೀಸ್)