ನೌಪಾರಾ (ಒಡಿಶಾ): ಬ್ಯಾಂಕ್ ಅಧಿಕಾರಿಗಳು ಜನಧನ ಖಾತೆಯಿಂದ ಹಣ ಹಿಂಪಡೆಯಲು ಬ್ಯಾಂಕ್ ಖಾತೆದಾರರೇ ಖುದ್ದಾಗಿ ಬ್ಯಾಂಕ್ಗೆ ಬರಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಕೂರಲೂ ಆಗದ ತನ್ನ ಶತಾಯುಷಿ ತಾಯಿಯನ್ನು ಮಂಚದ ಮೇಲೆ ಮಲಗಿಸಿದ 70 ವರ್ಷದ ಪುತ್ರಿ, ಮಂಚವನ್ನೇ ಬ್ಯಾಂಕ್ವರೆಗೆ ಎಳೆದೊಯ್ದಿದ್ದಾರೆ.
ಕೋವಿಡ್-19 ಪಿಡುಗು ಹಿನ್ನೆಲೆಯಲ್ಲಿ ಬಡವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿ ಅವರವರ ಜನಧನ ಖಾತೆಗೆ ಏಪ್ರಿಲ್ನಿಂದ ಜೂನ್ವರೆಗೆ 500 ರೂ.ಗಳನ್ನು ಜಮೆ ಮಾಡಿದೆ. ಈ ಹಣವನ್ನು ಹಿಂಪಡೆಯಲು ಬ್ಯಾಂಕ್ ಖಾತೆದಾರರೇ ಬ್ಯಾಂಕ್ಗೆ ಖುದ್ದಾಗಿ ಹೋಗುವುದು ಕಡ್ಡಾಯವಾಗಿದೆ.
ಈ ಯೋಜನೆಯನ್ವಯ ಒಡಿಶಾದ ನೌಪಾರಾ ಜಿಲ್ಲೆಯ ಗ್ರಾಮವೊಂದರ ನಿವಾಸಿ ಶತಾಯುಷಿ ಪೂಂಜಿಮಾತಿ ಡೇ ಎಂಬುವರ ಬ್ಯಾಂಕ್ ಖಾತೆಗೆ ಮೂರು ತಿಂಗಳಿಂದ ಒಟ್ಟು 1,500 ರೂ. ಜಮೆಯಾಗಿತ್ತು. ಈ ಹಣವನ್ನು ಪಡೆಯಲು ಡೇ ಅವರ ಪುತ್ರಿ 70 ವರ್ಷದ ಲಾಭೆ ಬಘೇಲ್ ಎಂಬುವರು ತಮ್ಮ ಗ್ರಾಮದಲ್ಲಿದ್ದ ಉತ್ಕಲ್ ಗ್ರಾಮೀಣ ಬ್ಯಾಂಕ್ನ ಶಾಖೆಗೆ ತೆರಳಿದ್ದರು. ಆದರೆ, ಹಣವನ್ನು ಹಿಂಪಡೆಯಲು ಬ್ಯಾಂಕ್ ಖಾತೆದಾರರೇ ಬ್ಯಾಂಕ್ಗೆ ಬರುವುದು ಕಡ್ಡಾಯವೆಂದು ಬ್ಯಾಂಕ್ನ ಮ್ಯಾನೇಜರ್ ಹೇಳಿದ್ದರು.
ಇದನ್ನು ಕೇಳಿಸಿಕೊಂಡ ಬಘೇಲ್, ಮನೆಗೆ ಹಿಂದಿರುಗಿ ತನ್ನ ತಾಯಿ ಮಂಚದ ಮೇಲೆ ಮಲಗಿರುವಂತೆ ಬ್ಯಾಂಕ್ವರೆಗೆ ಮಂಚವನ್ನು ಎಳೆದುಕೊಂಡು ಹೋಗಿದ್ದರು. ಬಳಿಕ 1,500 ರೂ.ಗಳನ್ನು ಹಿಂಪಡೆದು ಮನೆಗೆ ಮರಳಿದ್ದರು. ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಬಿಟ್ಟಾಗ ಅದು ವೈರಲ್ ಆಗಿದೆ.
ಇಷ್ಟೆಲ್ಲ ಸಾಹಸದ ಅಗತ್ಯ ಇರಲಿಲ್ಲ: ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನೌಪಾರಾದ ಜಿಲ್ಲಾಧಿಕಾರಿ ಮಧುಸ್ಮಿತಾ ಸಾಹೂ, ಈ ಬಗ್ಗೆ ವಿಚಾರಣೆ ನಡೆಸಿದೆ. ಉತ್ಕಲ ಗ್ರಾಮೀಣ ಬ್ಯಾಂಕ್ನಲ್ಲಿ ಮ್ಯಾನೇಜರ್ ಒಬ್ಬರೇ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ. ಹಾಗಾಗಿ, ಬಘೇಲ್ ಅವರು ಹೋಗಿ ಅವರ ತಾಯಿಯ ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಯತ್ನಿಸಿದಾಗ, ಸ್ವತಃ ತಾವೇ ಮನೆಗೆ ಬಂದು ತಾಯಿಯನ್ನು ಮಾತನಾಡಿಸಿ ಹಣ ಕೊಡುವುದಾಗಿ ಮ್ಯಾನೇಜರ್ ಹೇಳಿದ್ದರು. ಆದರೆ, ಬಘೇಲ ಮರುದಿನದವರೆಗೆ ಕಾಯುವ ಬದಲು ತಮ್ಮ ತಾಯಿಯನ್ನು ಮಂಚದ ಮೇಲೆ ಮಲಗಿಸಿ ಬ್ಯಾಂಕ್ವರೆಗೆ ಎಳೆದೊಯ್ದಿರುವುದು ದೃಢಪಟ್ಟಿದೆ. ಇದರಲ್ಲಿ ಮ್ಯಾನೇಜರ್ನ ತಪ್ಪು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.