ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಶೇ.50 ಹಾಸಿಗೆ ನೀಡದ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ. 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಪರವಾನಗಿ ರದ್ದುಗೊಳಿಸಿ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಆರ್ಟಿಯಂ ಆಸ್ಪತ್ರೆ, ರಂಗದೊರೈ ಮೆಮೊರಿಯಲ್ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ, ಡಾ. ಜಿವಿಜಿ ಹೆಲ್ತ್ ಕೇರ್, ಶ್ರೀನಿವಾಸ್ ಆಸ್ಪತ್ರೆ, ನಂದನ ಹೆಲ್ತ್ ಕೇರ್ ಸರ್ವಿಸ್ ಹಾಗೂ ಮೆಡ್ ಸ್ಟಾರ್ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ಕೋವಿಡ್ ಚಿಕಿತ್ಸೆಗೆ ಶೇ.50 ಹಾಸಿಗೆ ಮೀಸಲಿಡುವಂತೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, 4 ತಿಂಗಳು ಕಳೆದರೂ ಹಾಸಿಗೆ ನೀಡದೆ ನಿರ್ಲಕ್ಷ್ಯ ಮಾಡಿರುವ ಕಾರಣ ನೋಟಿಸ್ ನೀಡಲಾಗಿದೆ.
ರೋಗಿಗಳ ಸ್ಥಳಾಂತರ: ಪಾಲಿಕೆ ಶಿಾರಸಿನ ಮೇರೆಗೆ ಕೋವಿಡ್ ರೋಗಿಗಳನ್ನು ಸಾಮಾನ್ಯ ವಾರ್ಡ್ ಹಾಸಿಗೆ, ತೀವ್ರ ನಿಗಾ ಘಟಕ (ಐಸಿಯು) ಮತ್ತು ವೆಂಟಿಲೇಟರ್ ಐಸಿಯುಗಳಲ್ಲಿ ಶೇ.50 ಹಾಸಿಗೆ ಮೀಸಲಿಟ್ಟು ಚಿಕಿತ್ಸೆ ನೀಡಬೇಕು. ಸರ್ಕಾರವೇ ರೋಗಿಗಳ ವೆಚ್ಚ ಭರಿಸಲಿದೆ ಎಂದು ತಿಳಿಸಲಾಗಿತ್ತು. ಹಾಸಿಗೆ ನೀಡದ ಆಸ್ಪತ್ರೆಗಳು ನೋಟಿಸ್‌ಗೆ ಸೂಕ್ತ ಉತ್ತರ ನೀಡದಿದ್ದಲ್ಲಿ ಮೊದಲು ತುರ್ತು ರೋಗಿಗಳ ದಾಖಲಾತಿ ತಡೆಯಲಾಗುವುದು. ನಂತರ ಉಳಿದ ಎಲ್ಲ ರೋಗಿಗಳನ್ನು ಪರ್ಯಾಯವಾಗಿ ಬೇರೆ ಆಸ್ಪತ್ರೆಗಳಿಗೆ ರವಾನಿಸಿ, ಪರವಾನಗಿ ರದ್ದುಗೊಳಿಸಿ ಬೀಗ ಹಾಕಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಕೆ ನೀಡದ್ದಾರೆ.
ಹಿಂದೆಯೂ 36 ಆಸ್ಪತ್ರೆಗಳಿಗೆ ನೋಟಿಸ್ : ಕೋವಿಡ್ ಚಿಕಿತ್ಸೆಗೆ ಶೇ.50 ಹಾಸಿಗೆ ಮೀಸಲಿಡದ ಆಸ್ಪತ್ರೆಗಳ ಮೇಲೆ ಕೆಪಿಎಂಇ-2007 ಕಾಯ್ದೆ ಅನುಸಾರ ಕ್ರಮ ಜರುಗಿಸಲು ಬಿಬಿಎಂಪಿಗೆ ಅಧಿಕಾರ ನೀಡಲಾಗಿದೆ. ಸೆ. 16ರಂದು 36 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಕೆಲವು ಆಸ್ಪತ್ರೆಗಳು ಸಿಬ್ಬಂದಿ ಕೊರತೆ, ಇತರೆ ರೋಗಗಳ ಚಿಕಿತ್ಸೆಗೆ ಮೀಸಲಿಟ್ಟ ಹಾಸಿಗೆ ನೀಡಲು ಸಾಧ್ಯವಿಲ್ಲವೆಂದು ಹೇಳಿದ್ದವು. ನೋಟಿಸ್‌ಗೆ ಸೂಕ್ತ ಉತ್ತರ ನೀಡದ ಆಸ್ಪತ್ರೆಗಳ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.