ಬೆಂಗಳೂರು: ಒಂದು ನಿಮಿಷದ ಅವಧಿಯಲ್ಲಿ ಬರೋಬ್ಬರಿ 80 ಬಸ್ಕಿ ಹೊಡೆದ ಏಳು ತಿಂಗಳ ಮಗುವೊಂದು ಇದೀಗ ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಸ್ವೀಕರಿಸುವ ಮೂಲಕ ದಾಖಲೆ ನಿರ್ಮಿಸಿದೆ. ರಾಮನಗರ ತಾಲೂಕಿನ ಕೇತೋಹಳ್ಳಿ ಗ್ರಾಮದ ನಿಸರ್ಗ ಬಾಲರಾಜ್ ದಂಪತಿಯ ಮಗುವಿಗೆ ಈ ಪ್ರಶಸ್ತಿ ಲಭಿಸಿದ್ದು, ಪ್ರಮಾಣಪತ್ರವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪೋಷಕರಿಗೆ ಹಸ್ತಾಂತರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಏಳು ತಿಂಗಳ ಈ ಪುಟ್ಟ ಪೋರನ ಹೆಸರು ಸಾತ್ವಿಕ್ ಬಿ.ಗೌಡ, ಮೊದಲಿನಿಂದಲೂ ಚುರುಕಿನ ಪುಟಾಣಿ. ಪೋಷಕರ ಅಚ್ಚುಮೆಚ್ಚಿನ ಮಗನಾದ ಸಾತ್ವಿಕ್ ಸಮಯವನ್ನೇ ಮೀರಿಸುವಂತೆ ವೇಗವಾಗಿ ಬಸ್ಕಿ ಹೊಡೆಯುವುದನ್ನು ಕರಗತ ಮಾಡಿಕೊಂಡಿದ್ದಾನೆ. ಒಂದು ನಿಮಿಷದ ಅವಧಿಯೊಳಗೆ 80ರಿಂದ 90 ಬಸ್ಕಿ ಹೊಡೆಯುವ ಅಭ್ಯಾಸವನ್ನು ರೂಢಿಸಿಕೊಂಡು ಇಂದು ದಾಖಲೆಯೊಂದನ್ನು ನಿರ್ಮಿಸಿದ್ದಾನೆ.
ಒಂದು ನಿಮಿಷದಲ್ಲಿ 80 ಬಸ್ಕಿ ಹೊಡೆದ ಪುತ್ರನ ವಿಡಿಯೋವನ್ನು ಪೋಷಕರು ನೋಬೆಲ್ ವರ್ಲ್ಡ್ ರೆಕಾರ್ಡ್ ವೆಬ್ಸೈಟ್ಗೆ ದಾಖಲಿಸಿದ್ದಾರೆ. ಇದಾದ ಬಳಿಕ ಜನವರಿ 17ರಂದು ಮಗುವಿಗೆ ಈ ಪ್ರಶಸ್ತಿ ಒಲಿದುಬಂದಿದೆ. ಅವಾರ್ಡ್ ಬಂದ ಸಂತಸದಲ್ಲಿ ನಿಸರ್ಗ ಬಾಲರಾಜ್ ದಂಪತಿ, ಈ ಪ್ರಶಸ್ತಿಯನ್ನು ಎಚ್.ಡಿ. ಕುಮಾರಸ್ವಾಮಿ ಅವರಿಂದಲೇ ಸ್ವೀಕರಿಸಬೇಕು ಎಂಬ ಮಹದಾಸೆಯಿಂದ ಇಂದು ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ.